ನವದೆಹಲಿ: ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಪರಿಸರವಾದಿಗಳು, ಸಮಾಜ ಸುಧಾರಕರು ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಕೆಲವರು ಸಮಾಜಕ್ಕೆ ಬಿಟ್ಟಿ ಸಲಹೆಗಳನ್ನು ನೀಡುವುದು, ಹಬ್ಬಗಳನ್ನು ಹೇಗೆ ಆಚರಿಸಬೇಕು ಮತ್ತು ಹೇಗೆ ಆಚರಿಸಬಾರದು ಎಂಬೆಲ್ಲಾ ಜ್ಞಾನಗಳನ್ನು ನೀಡುವುದು ಸಾಮಾನ್ಯ ಎಂಬಂತಾಗಿದೆ. ಈ ಬಾರಿ ಹೋಳಿ ಹಬ್ಬಕ್ಕೆ ಸಲಹೆಗಳನ್ನು ನೀಡಲು ಹೋಗಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಭಾರತ್ ಮ್ಯಾಟ್ರಿಮೋನಿ ಮತ್ತು ಸ್ವಿಗ್ಗಿ ಜನರ ಆಕ್ರೋಶಕ್ಕೆ ತುತ್ತಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಭಾರತ್ ಮ್ಯಾಟ್ರಿಮೋನಿ ಹೋಳಿ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿ, “ಕಿರುಕುಳದಿಂದಾಗಿ ಬಹಳಷ್ಟು ಮಹಿಳೆಯರು ಹೋಳಿ ಆಡುವುದನ್ನು ನಿಲ್ಲಿಸಿದ್ದಾರೆ. ಈ ವೀಡಿಯೋವನ್ನು ನೋಡಿ, ಇದು ಕಠಿಣವಾದ ಜೀವನವನ್ನು ತೆರೆದಿಟ್ಟಿದೆ. ಈ ಹೋಳಿಯ ಸಂದರ್ಭ ನಾವು ಮಹಿಳಾ ದಿನವನ್ನು ಆಚರಿಸೋಣ ಮತ್ತು ಅವರನ್ನು ಪ್ರತಿದಿನ ಸುರಕ್ಷಿತವಾಗಿಡೋಣ” ಎಂದು ಟ್ವೀಟ್ ಮಾಡಿದೆ.
ಹೀಗಾಗಿ ಭಾರತ್ ಮ್ಯಾಟ್ರಿಮೋನಿ ಹೋಳಿ ವಿರುದ್ಧ ಜಾಹೀರಾತು ಮಾಡುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ನೆಟಿಜನ್‌ಗಳು ಬಾಯ್ಕಾಟ್ ಕರೆ ನೀಡಿದ್ದಾರೆ.
ಇನ್ನೊಂದೆಡೆ ಸ್ವಿಗ್ಗಿ, ಮೊಟ್ಟೆಯನ್ನು ಆಮ್ಲೇಟ್, ಖಾದ್ಯವಾಗಿ ಬಳಸಿ, ಪರಸ್ಪರ ಒಡೆಯಲು ಬಳಸಬೇಡಿ ಎಂದು ಸಲಹೆ ನೀಡಿ ಜನರ ಆಕ್ರೋಶಕ್ಕೆ ತುತ್ತಾಗಿದೆ. ಜನರ ವಿರೋಧದ ಹಿನ್ನೆಲೆಯಲ್ಲಿ ಬಳಿಕ ಜಾಹೀರಾತನ್ನು ವಾಪಾಸ್ ಪಡೆದುಕೊಂಡಿದೆ. ಆದರೆ ಭಾರತ್ ಮ್ಯಾಟ್ರಿಮೋನಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.