ಸಿದ್ದಾಪುರ: ಮಾ.9 ಮತ್ತು 10ರಂದು ಬೇಡ್ಕಣಿಯ ಶ್ರೀಕೋಟೆ ಹನುಮಂತ ದೇವಾಲಯದಲ್ಲಿ ಆಡಳಿತ ಸೇವಾ ಸಮಿತಿಯ ಕಚೇರಿ ಕಟ್ಟಡದ ಮೊದಲ ಮಹಡಿಯ ಪ್ರಾರಂಭೋತ್ಸವ, 1008 ಸಾಮೂಹಿಕ ಹನುಮದ್ ವ್ರತ, ರಾಮತಾರಕ ಹವನ, ಹನುಮಂತ ಮೂಲಮಂತ್ರ ಹವನ ಮತ್ತು ಧರ್ಮಸಭೆ ದೇವಾಲಯದ ಸೇವಾ ಸಮಿತಿ ಹಾಗೂ ಶ್ರೀಕೋಟೆ ಹನುಮಂತ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯಲಿದೆ. ದೇವಾಲಯದ ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಸಮಿತಿಯ ಅಧ್ಯಕ್ಷ ವಿ.ಎನ್.ಬೇಡ್ಕಣಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಮಾ.9ರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾ.10ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಪೂಜೆ ಹಾಗೂ ನವಗ್ರಹ ಹವನ ಪೂರ್ವಕ ರಾಮತಾರಕ ಹವನ, ಹನುಮಂತ ಮೂಲಮಂತ್ರ ಹವನ, ಸಹಸ್ರ ಹನುಮಂತವ್ರತ ನಡೆಯಲಿದೆ. 11.30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಕಲಶಾಭಿಷೇಕ, ದೇವತಾ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ನೂತನ ಕಛೇರಿಯ ಕಟ್ಟಡದ ಮೊದಲ ಮಹಡಿಯ ಉದ್ಘಾಟನೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ನಡೆಯಲಿದೆ. ಅವರ ದಿವ್ಯ ಸಾನ್ನಿದ್ಯದಲ್ಲಿ ಧರ್ಮಸಭೆ ನಡೆಯಲಿದೆ. ಸಿಗಂದೂರಿನ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ, ಶಿರಸಿ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್.ಜಿ.ನಾಯ್ಕ, ಬೇಡ್ಕಣಿ ಶನೇಶ್ವರ ದೇವಾಲಯದ ಅಧ್ಯಕ್ಷ ಜಿ.ಕೆ.ನಾಯ್ಕ, ಕಡಲೆ ಹನುಮಂತ ದೇವಾಲಯದ ಅಧ್ಯಕ್ಷ ವಿ.ಎಂ.ಭಟ್ಟ ಡೊಂಬೆಕೈ, ಉದ್ಯಮಿ ಉಪೇಂದ್ರ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಅಧ್ಯಕ್ಷತೆ ವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಾಲಯ ಸಮಿತಿಯ ರಾಮ ನಾಯ್ಕ ಹುಲಿಮನೆ, ಸಂಜೀವ ನಾಯ್ಕ, ನಾರಾಯಣ ನಾಯ್ಕ, ಮಂಜುನಾಥ ಮಡಿವಾಳ, ಕಾರ್ಯದರ್ಶಿ ರಮೇಶ ನಾಯ್ಕ ಮೊದಲಾದವರು ಇದ್ದರು.