ಕುಮಟಾ: ತಾಲೂಕಿನ ಕಾಗಲ ಗ್ರಾ.ಪಂ ವ್ಯಾಪ್ತಿಯ ಕಿರುಬೇಲೆ ಗ್ರಾಮದ ಸಾರ್ವಜನಿಕರ ರಸ್ತೆಯನ್ನು ಬಂದ್ ಮಾಡಿ, ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ನೀಡಿದ ಖಾಸಗಿ ವ್ಯಕ್ತಿಯೋರ್ವರು ಮಾಡಿದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಧಾರವಾಡ ಹೈಕೋರ್ಟ್ ಆದೇಶ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಆರ್.ಎಚ್.ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಲ್ ಗ್ರಾಪಂ ವ್ಯಾಪ್ತಿಯ ಕಿರುಬೇಲೆ ಕಡಲ ತೀರಕ್ಕೆ ಮತ್ತು ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಖಾಸಗಿ ವ್ಯಕ್ತಿಯೋರ್ವರು ಬಂದ್ ಮಾಡಿದ್ದರು. ರಸ್ತೆಗೆ ಕಬ್ಬಿಣದ ಗೇಟ್ ಅಳವಡಿಸಿ, ಅನಾದಿಕಾಲದಿಂದ ಇದ್ದ ಸಾರ್ವಜನಿಕ ರಸ್ತೆ ಆ ಭಾಗದ ಜನರ ಸಂಚಾರಕ್ಕೆ ದೊರೆಯದಂತಾಗಿ, ತೀವ್ರ ಸಮಸ್ಯೆ ಎದುರಿಸುವಂತಾಯಿತು. ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡುವ ದುರುದ್ದೇಶದಿಂದ ಅಳವಡಿಸಲಾದ ಈ ಅನಧಿಕೃತ ಗೇಟ್‌ನ್ನು ತೆರವುಗೊಳಿಸಿ, ಅಲ್ಲಿನ ಕೆಲ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಅಲ್ಲಿಮ ಗ್ರಾಮಸ್ಥರೆಲ್ಲರೂ ಸೇರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವಿನಂತಿ ಮಾಡಲಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಅನಿವಾರ್ಯವಾಗಿ ಮತ್ತು ಬಡ ಜನರಿಗೆ ನ್ಯಾಯ ಕೊಡಿಸಲು ಧಾರವಾಡ ಹೈ ಕೋರ್ಟ್ನ ಮೊರೆ ಹೋಗಿದ್ದೆವು ಎಂದರು.
ವಾದ ವಿವಾದ ಆಲಿಸಿದ ಹೈ ಕೋರ್ಟ್ ಕಿರುಬೇಲೆ ಮೂಲ ನಿವಾಸಿಗಳು ಮತ್ತು ಊರ ನಾಗರಿಕರು ಅನಾದಿಕಾಲದಿಂದ ಓಡಾಡುತ್ತಿದ್ದ ಸಾರ್ವಜನಿಕ ರಸ್ತೆಗೆ ಅಳವಡಿಸಲಾದ ಗೇಟ್‌ನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಆದೇಶ ಮಾಡಿ, ಸೂಚಿಸಿದೆ. ಅಲ್ಲದೇ ಕಡಲ ತೀರದಲ್ಲಿ ನಿಯಮ ಮೀರಿ ನಿರ್ಮಿಸಲಾದ ಕಟ್ಟಡ ಮತ್ತು ಸಮುದ್ರದ ಉಬ್ಬರಿನ ಜಾಗದಲ್ಲಿ ಹಾಕಲಾದ ಬೇಲಿಯನ್ನು ನೆರವುಗೊಳಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಆ ಭಾಗದ ಜನರ ನ್ಯಾಯಯುತ ಹೋರಾಟಕ್ಕೆ ಜಯ ದೊರೆದಂತಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಠೋಬ ಅಂಗಡಿಕೇರಿ, ಲಕ್ಷ್ಮೀನಾರಾಯಣ ಕುಮಟಾಕರ್, ಶ್ರೀಕಾಂತ ನಾಯ್ಕ, ನಾಗೇಶ ನಾಯ್ಕ, ತುಕಾರಾಮ ನಾಯ್ಕ, ವಿನಾಯಕ ಭಂಡಾರಿ ಇದ್ದರು.