ಶಿರಸಿ: ವಿದುಷಿ ಸ್ಮಿತಾ ಹೆಗಡೆ ಕುಂಟೆಮನೆ ನಡೆಸುತ್ತಿರುವ ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ತೃತೀಯ ವಾರ್ಷಿಕ ನಾದೋಪಾಸನೆ ಕಾರ್ಯಕ್ರಮವು ಇತ್ತೀಚೆಗೆ ನಗರದ ಆದರ್ಶ ವನಿತಾ ಸಮಾಜದಲ್ಲಿ ನಡೆಯಿತು.
ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದ ಶಾಂತಾರಾಮ್ ಹೆಗಡೆ ಸುಗಾವಿ, ವಿದ್ಯಾಲಯವು ಈ ವರ್ಷ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ನೋಂದಾವಣೆಗೊಂಡಿರುವುದನ್ನು ಸ್ಮರಿಸಿ ಹರ್ಷ ವ್ಯಕ್ತಪಡಿಸುತ್ತಾ ಸಂಗೀತ ಮನಸ್ಸಿಗೆ ಏಕಾಗ್ರತೆಗೆ ಹೆಚ್ಚು ಪುಷ್ಠಿಯನ್ನು ಕೊಡುವುದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಗೀತಾಭ್ಯಾಸ ಮಾಡಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಾಹ್ನ 3 ಗಂಟೆಯಿಂದ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ರಾಗಗಳನ್ನು ತಮ್ಮ ಗಾಯನದಲ್ಲಿ ಪ್ರಸ್ತುತಪಡಿಸಿದರು. ಸಂವಾದಿನಿಯಲ್ಲಿ ಶೈಲಾ ಮತ್ತಿಘಟ್ಟ ಹಾಗೂ ತಬಲಾ ವಾದನದಲ್ಲಿ ಕುಮಾರ ಸೂರ್ಯಕುಮಾರ, ಚಿನ್ಮಯ್ ಹಾಗೂ ರಾಘವೇಂದ್ರ ಕಾರಂತ್ ಹಾಗೂ ತಂಬೂರದಲ್ಲಿ ಶ್ರೀಮತಿ ಭವ್ಯ ಹೆಗಡೆ ಸಾತ್ ನೀಡಿದರು. ಕೊನೆಯಲ್ಲಿ ಸಂಗೀತ ಶಿಕ್ಷಕಿ ವಿದುಷಿ ಸ್ಮಿತಾ ಹೆಗಡೆ ಭೂಪಾಲಿ ರಾಗದಿಂದ ತಮ್ಮ ಕಚೇರಿಯನ್ನು ಪ್ರಾರಂಭಿಸಿ ನಂತರ ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಸಂಗೀತಾಸಕ್ತರನ್ನು ಸಂತಸಗೊಳಿಸಿದರು. ಇವರಿಗೆ ಸಾಗರದ ವಿದುಷಿ ವಸುಧಾ ಶರ್ಮ ಶಿಷ್ಯರಾದ ಕುಮಾರ ಸಂವತ್ಸರ ಸಂವಾದಿನಿಯಲ್ಲಿ ಹಾಗೂ ಖ್ಯಾತ ತಬಲಾವಾದಕ ಮಂಜುನಾಥ ಮೋಟಿನಸರ್ ತಬಲಾದಲ್ಲಿ, ಶ್ರೀದೇವಿ ಕಿಣಿ ತಾಳದಲ್ಲಿ, ಕುಮಾರಿ ವಿದ್ಯಾ ಮಂಗಳೂರ ತಂಬೂರ ಸಹಕಾರ ನೀಡಿದರು.
ಸಭೆಯ ಆರಂಭದಲ್ಲಿ ಶಿಕ್ಷಕಿಯರಾದ ಸುನೈನಾ ಹೆಗಡೆ ಮತ್ತು ರಾಜೇಶ್ವರಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳ ಗಾಯನ ಪ್ರಸ್ತುತಿ ಕಾರ್ಯಕ್ರಮವನ್ನು ಶ್ರೀಮತಿ ಸುವರ್ಣ ಹೆಗಡೆ ನಿರ್ವಹಿಸಿಕೊಟ್ಟರು. ಕೊನೆಯಲ್ಲಿ ಶ್ರೀಮತಿ ಜಾನಕಿ ಹೆಗಡೆ ವಂದಿಸಿದರು.