ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಅಂಗವಿಕಲರ ರ‍್ಯಾಂಪ್ ಎದುರು ಶುಲ್ಕದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಅಂಗವಿಕಲ ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಗಿದೆ. ಇದರಿಂದಾಗಿ ಈ ರ‍್ಯಾಂಪ್ ಪ್ರಯೋಜನಕ್ಕೆ ಬಾರದಂತಾಗಿದೆ.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಅಂಗವಿಕಲ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ಅಂಗವಿಕಲರ ರ‍್ಯಾಂಪ್ ನಿರ್ಮಿಸಿದೆ. ಬಸ್ ನಿಲ್ದಾಣದೊಳಕ್ಕೆ ತೆರಳಲಿರುವ ಮೆಟ್ಟಿಲುಗಳನ್ನು ಹತ್ತಲು ಅಂಗವಿಕಲರಿಗೆ ತೊಂದರೆಯಾಗಲಿದೆ. ಹಾಗಾಗಿ ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಸಂಸ್ಥೆಯು ಅಂಗವಿಕಲರಿಗೆ ಮೀಸಲಿಟ್ಟ ಅನುದಾನವನ್ನು ಬಳಸಿ, ಈ ರ‍್ಯಾಂಪ್ ನಿರ್ಮಿಸಿದೆ. ಇಳಿಜಾರಾಗಿರುವ ರ‍್ಯಾಂಪ್‌ನಲ್ಲಿ ಅಂಗವಿಕಲರು ಸುಲಭವಾಗಿ ತೆರಳಬಹುದು. ಅಲ್ಲದೇ ವ್ಹೀಲ್ ಚೇರ್ ಮೇಲೆ ಬರುವ ಅಂಗವಿಕಲರಿಗೂ ಈ ರ‍್ಯಾಂಪ್ ಹೆಚ್ಚು ಸಹಾಯಕಾರಿಯಾಗಲಿದೆ.
ಆದರೆ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿರುವ ಅಂಗವಿಕಲರ ರ‍್ಯಾಂಪ್ ಲಗೇಜ್‌ಗಳನ್ನಿಡುವ ಸ್ಥಳವಾಗಿ ಪಾರ್ಪಟ್ಟಿದೆ. ಅಲ್ಲದೇ ಈ ರ‍್ಯಾಂಪ್‌ನ ಎದುರಲ್ಲಿಯೇ ಶುಲ್ಕವಿರುವ ಬೈಕ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಪ್ರಯಾಣಿಕರು ಈ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇಟ್ಟು ತೆರಳುವುದರಿಂದ ಈ ರ‍್ಯಾಂಪ್‌ನ ಮುಂಭಾಗ ಬೈಕ್‌ಗಳಿಂದಲೇ ಮುಚ್ಚಿರುತ್ತದೆ. ಹಾಗಾಗಿ ಅಂಗವಿಕಲರಿಗೆ ಬಸ್ ನಿಲ್ದಾಣದೊಳಕ್ಕೆ ಬರಲು ಸಮಸ್ಯೆಯಾಗಿದೆ. ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಅಂಗವಿಕಲರ ರ‍್ಯಾಂಪ್‌ನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಅಂಗವಿಕಲರಿಗೆ ತಿರುಗಾಡಲು ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಂಗವಿಕಲರ ಸಂಘಟನೆಯ ನೇತೃತ್ವದಲ್ಲಿ ಬಸ್ ನಿಲ್ದಾಣದ ಎದುರಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮಂಜುನಾಥ ಕಾಗಲ್ ಅವರು ಎಚ್ಚರಿಸಿದ್ದಾರೆ.