ಶಿರಸಿ: ಫೆ. 28ರಿಂದ ನಡೆಯಲಿರುವ ಬನವಾಸಿ ಕದಂಬೋತ್ಸವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಶಿರಸಿ ಮಿನಿ ವಿಧಾನಸೌಧದಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ಗುರುವಾರ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕದಂಬೋತ್ಸವ ಸಿದ್ಧತೆ ಮಾಡಬೇಕು. ಕದಂಬೋತ್ಸವದಲ್ಲಿ ಸುಮಾರು 40 ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗಿದೆ. ಶೌಚಾಲಯ, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ ಸೇರಿ ಹಲವು ಮೂಲಭೂತ ಸೌಕರ್ಯ ಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬನವಾಸಿ ಮತ್ತು ಗುಡ್ನಾಪುರ ಗ್ರಾಪಂಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಫೆ. 28ರಂದು ಮುಖ್ಯಮಂತ್ರಿಗಳು ಬನವಾಸಿಗೆ ಆಗಮಿಸುತ್ತಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.
ಉಪ ವಿಭಾಗಾಧಿಕಾರಿ ದೇವರಾಜ್ ಆರ್ ಮಾತನಾಡಿ, “ಕದಂಬ ಜ್ಯೋತಿಯ ರಥ ಸಿದ್ಧವಾಗುತ್ತಿದೆ. ರಥದ ಜೊತೆ ನೋಡೆಲ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇರುವಂತೆ ಸೂಚಿಸಲಾಗಿದೆ. ಲೋಪದೋಷಗಳು ಆಗದಂತೆ ಕದಂಬೋತ್ಸವ ಸಿದ್ಧತೆ ನಡೆಸಬೇಕು” ಎಂದರು.
ಕದಂಬೊತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಕಿರಣ್ ನಾಯ್ಕ ಮಾತನಾಡಿ, “ಫೆ.26ರಂದು ಕ್ರೀಡಾ ಚಟುವಟಿಕೆಗಳು ಆರಂಭವಾಗಲಿವೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮಧ್ಯಾಹ್ನ 3 ಗಂಟೆಗೆ ಜಯಂತಿ ಪ್ರೌಢಶಾಲೆ ಮೈದಾನದಲ್ಲಿ ಕ್ರೀಡಾಕೂಟ ಆರಂಭವಾಗಲಿದೆ. ಫೆ.27ರಂದು ಕಬಡ್ಡಿ ಹಾಗೂ ಮೋಜಿನ ಆಟಗಳು ನಡೆಯಲಿವೆ ಎಂದು ತಿಳಿಸಿದರು.
ಹಗ್ಗ ಜಗ್ಗಾಟ ಸ್ಪರ್ಧೆಗೆ (ಮಹಿಳಾ ಹಾಗೂ ಪುರುಷ) ಪ್ರಥಮ ಬಹುಮಾನ 9 ಸಾವಿರ ರೂ., ದ್ವಿತೀಯ 6 ಸಾವಿರ ರೂ., ಕೇರಂ ಸ್ಪರ್ಧೆಗೆ ಪ್ರಥಮ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ. ನಿಗದಿ ಪಡಿಸಲಾಗಿದೆ.
ತಲೆ ಮೇಲೆ ಪುಸ್ತಕ ಹೊತ್ತುಕೊಂಡು ಓಡುವ ಸ್ಪರ್ಧೆಯ ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತೀಯ 1,500 ರೂ., ತೃತೀಯ 1 ಸಾವಿರ ರೂ. ನಿಗದಿ ಮಾಡಲಾಗಿದೆ. ಲಿಂಬು ಚಮಚ ಓಟದ ಸ್ಪರ್ಧೆಗೆ ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತೀಯ 1.5 ಸಾವಿರ ರೂ., ತೃತೀಯ 1ಸಾವಿರ ರೂ. ಇರಲಿದೆ. ಸ್ಲೋ ಸೈಕಲ್ ಸ್ಪರ್ಧೆಗೆ ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತೀಯ 1,500 ರೂ., ತೃತೀಯ 1ಸಾವಿರ ರೂ. ಬಹುಮಾನ ಇರಲಿದೆ ಎಂದರು.
35 ವರ್ಷ ಒಳಗಿನ ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆಗಳು:
ಬಟಾಟೆ ರೇಸ್‌ಗೆ ಪ್ರಥಮ ಬಹುಮಾನ 2 ಸಾವಿರ ರೂ.,ದ್ವಿತೀಯ 1.5 ಸಾವಿರ ರೂ., ತೃತೀಯ 1 ಸಾವಿರ ರೂ. ಬಹುಮಾನ ಇರಲಿದೆ. ಗೋಣಿಚೀಲ ಓಟದ ಸ್ಪರ್ಧೆಗೆ ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತಿಯ 1.5 ಸಾವಿರ ರೂ., ತೃತೀಯ 1 ಸಾವಿರ ರೂ, ಸೋ ಸೈಕಲ್ ಸ್ಪರ್ಧೆ ಪ್ರಥಮ 2 ಸಾವಿರ ರೂ., ದ್ವಿತೀಯ 1.5 ಸಾವಿರ ರೂ., ತೃತೀಯ 1 ಸಾವಿರ ರೂ. ಬಹುಮಾನ ಇರಲಿದೆ. ಕಬ್ಬಡ್ಡಿಗೆ ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತಿಯ 15 ಸಾವಿರ ರೂ., ತೃತೀಯ 10 ಸಾವಿರ ರೂ., ಚತುರ್ಥ 5 ಸಾವಿರ ರೂ. ಬಹುಮಾನ ಇರಲಿದೆ. ಕೇರಂ ಸ್ಪರ್ಧೆಯನ್ನು ಸೇರ್ಪಡೆ ಮಾಡಲಾಗಿದೆ ಎಂದರು. ಈ ವೇಳೆ ತಹಸೀಲ್ದಾರ್ ಸುಮಂತ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.