ದಾಂಡೇಲಿ: ನಗರದ ಟೌನ್ ಶಿಪ್ನಲ್ಲಿರುವ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳ ವಾರ್ಷಿಕೋತ್ಸವ ನಡೆಯಿತು.
ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಸಿಸ್ಟರ್ ಪ್ರೇಮಲತಾ ಬಿ.ಎಸ್, ಸೆಂಟ್ ಮೈಕಲ್ ಕಾನ್ವೆಂಟ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆಧ್ಯತೆಯನ್ನು ನೀಡಿ ಕೆಲಸ ನಿರ್ವಹಿಸುತ್ತದೆ. ಸೆಂಟ್ ಮೈಕಲ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ಗುಣಮಟ್ಟದಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ನಗರದ ಎಲ್ಲರ ಮೆಚ್ಚಿನ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಮಕ್ಕಳ ಉಜ್ವಲ ಭವಿಷ್ಯವನ್ನು ದೃಷ್ಟಿಯಲ್ಲಿಕೊಂಡು ಇಲ್ಲಿ ಕಲಿಕಾಭ್ಯಾಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ನಗರದ ಬಂಗೂರನಗರ ಪದವಿ ಮಹಾ ವಿದ್ಯಾಲಯದ ಉಪ ಪ್ರಾಚಾರ್ಯರಾದ ಎಸ್.ಎಸ್.ಹಿರೇಮಠ, ಸೆಂಟ್ ಮೈಕಲ್ ಕಾನ್ವೆಂಟ್ ಜ್ಞಾನ ದೇಗುಲವು ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಸೇವೆಯಲ್ಲಿ ಪ್ರಾಂಜಲ ಮನಸ್ಸಿನಿಂದ ಸಮರ್ಪಿಸಿಕೊಂಡಿದೆ. ಇಲ್ಲಿ ಕಲಿತ ಅದೇಷ್ಟೊ ವಿದ್ಯಾರ್ಥಿಗಳು ಜಗತ್ತಿನೆಲ್ಲೆಡೆ ಉನ್ನತ ಉದ್ಯೋಗದಲ್ಲಿರುವುದನ್ನು ನಾವು ಕಾಣುತ್ತಿದ್ದೇವೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ. ಈ ನಿಟ್ಟಿನಲ್ಲಿ ಸೆಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಸೇವೆ ಶ್ಲಾಘನೀಯ ಎಂದರಲ್ಲದೇ, ನಗರ ಹಾಗೂ ನಗರದ ಸುತ್ತಮುತ್ತಲ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಈ ಶಾಲೆಯ ಮಹತ್ವಪೂರ್ಣ ಕೊಡುಗೆ ಸದಾ ಮುಂದುವರಿಯಲೆಂದು ಶುಭ ಹಾರೈಸಿದರು.
ಸುವಿಷನ್ ಪ್ರೈ ಲಿಮಿಟೆಡ್ ಬೆಂಗಳೂರು ಇದರ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಚಾಯಾ ಆಗಸ್ಟಿನ್ ಅವರು ಸೆಂಟ್ ಮೈಕಲ್ ಕ್ವಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರ ಪ್ರಾಮಾಣಿಕ ಸೇವೆ ಸದಾ ಸ್ಮರಣೀಯ. ಇಲ್ಲಿಯ ಶಿಕ್ಷಕ ವೃಂದದವರ ಶ್ರಮ ಸದೃಢ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ. ವಿದ್ಯಾರ್ಥಿಗಳು ಆಟ ಪಾಠ ಎರಡು ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಭಾಗವಹಿಸಿ ಭವಿಷ್ಯದ ಉನ್ನತ ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಯಿನಿ ಸಿಸ್ಟರ್ ಕ್ಲೇರಟ್.ಬಿ.ಎಸ್ ಅವರು ಶಾಲೆ ಬೆಳೆಉದ ಬಂದ ಹಾದಿಯನ್ನು ವಿವರಿಸಿ, ಶಾಲೆಯ ಪ್ರಗತಿಗೆ ಶಾಲೆಯ ಆಡಳಿತ ಮಂಡಳಿಯ ಜೊತೆಗೆ ಮಕ್ಕಳ ಪಾಲಕರ ಸಹಕಾರವು ಸಮರಣೀಯವಾಗಿದೆ ಎಂದರು.
ವೇದಿಕೆಯಲ್ಲಿ ಸೇಂಟ್ ಮೈಕಲ್ ಕಾನ್ವೆಂಟ್ ಶಾಲೆಯ ವೀಣಾ.ಬಿ.ಎಸ್ ಮತ್ತು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಯಿನಿ ವಿನಿತಾ ಡಯಾಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ‍್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಂದ ಸ್ವಾಗತ, ಅತಿಥಿ ಪರಿಚಯ, ಪ್ರಾರ್ಥನೆ, ಸ್ವಾಗತ ಗೀತೆ ನಡೆದ ಕಾರ‍್ಯಕ್ರಮಕ್ಕೆ ಕೊನೆಯಲ್ಲಿ ಶಿಕ್ಷಕಿಯರಾದ ಜೂಲಿಯನಾ ಮಂಥೆರೊ ಕರ‍್ಯಕ್ರಮ ನಿರೂಪಿಸಿದರು ಮತ್ತು ಮಂಗಲಾ ಫರ್ನಾಂಡೀಸ್ ವಂದಿಸಿದರು. ಸಭಾ ಕಾರ‍್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಿ ಜನಾಕರ್ಷಣೆಗೆ ಪಾತ್ರವಾಯಿತು. ಕಾರ‍್ಯಕ್ರಮದ ಯಶಸ್ಸಿಗೆ ಶಾಲಾ ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಶ್ರಮಿಸಿದ್ದರು.
ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ
