ದಾಂಡೇಲಿ: ನಾಲ್ಕು ವಿಭಿನ್ನ ಪ್ರಬೇಧಗಳ ಹಾರ್ನ್ಬಿಲ್‌ಗಳು ದಾಂಡೇಲಿ ಮತ್ತು ಜೋಯಿಡಾದಲ್ಲಿ ಹೇರಳವಾಗಿದ್ದು, ಈ ಭಾಗದ ಪ್ರವಾಸೋದ್ಯಮದ ಪ್ರಗತಿಯಲ್ಲಿ ಹಾರ್ನ್ಬಿಲ್ ಹಕ್ಕಿಗಳ ಕೊಡುಗೆ ಅಪಾರವಾಗಿದೆ. ತನ್ನ ವಿಶಿಷ್ಟ ಆಕರ್ಷಕ ಬಣ್ಣ ಮತ್ತು ಶರೀರದಿಂದಲೆ ಹಾರ್ನ್ಬಿಲ್ ಹಕ್ಕಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರು ಹಾರ್ನ್ ಬಿಲ್ ಹಕ್ಕಿಗೆ ಮನಸೋಲದೆ ಇರಲು ಸಾಧ್ಯವೆ ಇಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ ಹಾರ್ನ್ಬಿಲ್ ಹಕ್ಕಿಯ ಮಹತ್ವ, ಅದರ ವಿಶೇಷತೆಯ ಅರಿವಿನ ಜೊತೆಗೆ ಅವುಗಳ ಸಂರಕ್ಷಣೆಯ ಮಹತ್ವದ ಹಿತದೃಷ್ಟಿಯಿಂದ ಹಾರ್ನ್ಬಿಲ್ ಹಬ್ಬವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಕರ್ನಾಟಕ ಅರಣ್ಯ ಇಲಾಖೆ, ಕೆನರಾ ವೃತ್ತ ಶಿರಸಿ ಇದರ ಹಳಿಯಾಳ ವಿಭಾಗದ ಆಶ್ರಯದಡಿ ಶನಿವಾರ ನಗರದ ಹಳೆದಾಂಡೇಲಿಯ ಹಾರ್ನ್ಬಿಲ್ ಸಭಾಭವನದಲ್ಲಿ ಹಾರ್ನ್ಬಿಲ್ ಹಬ್ಬ -2023 ಕಾರ‍್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಈ ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಪರಿಣಾಮವಾಗಿ ಪ್ರವಾಸೋದ್ಯಮ ಶರವೇಗದಿಂದ ಬೆಳೆಯುತ್ತಿದೆ. ಪರಿಸರ ಮತ್ತು ವನ್ಯಸಂಕುಲಕ್ಕೆ ಹೊಂದಿಕೊಂಡು ಜೀವನ ನಡೆಸುವ ಪದ್ಧತಿ ನಮ್ಮದಾಗಿರುವುದರಿಂದಲೆ ಇಲ್ಲಿಯ ಪರಿಸರ ಇನ್ನೂ ಸಮೃದ್ಧವಾಗಿರುವುದನ್ನು ನಾವು ನೋಡಬಹುದು. ಮಾನವನಾಗಿ ಹುಟ್ಟಿದ ನಾವು ಮಾನವರಾಗಿ ಬಾಳಿದಾಗ ಮಾತ್ರ ಇಂತಹ ಸಮೃದ್ಧ ಪರಿಸರ ಸದಾ ಉಳಿಯಲು ಸಾಧ್ಯವಿದೆ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಶಿರಸಿಯ ಅರಣ್ಯ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಧರ್.ಡಿ.ಭಟ್ ಆದರ್ಶ ದಂಪತಿ ಪಟ್ಟಿಗೆ ಸೇರಿಸಬಹುದಾದ ಹಾರ್ನ್ ಬಿಲ್ ಹಕ್ಕಿಯ ಬದುಕು, ಜೀವನ ಕ್ರಮ ಅತ್ಯಾಕರ್ಷಕವಾಗಿದೆ. ಮನುಷ್ಯರಂತೆ ಸಂಸಾರ ನಡೆಸುವ ಈ ಹಕ್ಕಿಗಳು ಪಕ್ಷಿ ಪ್ರಪಂಚದ ರಾಮಸೀತೆ ಎಂದೆ ಕರೆಯಲ್ಪಡುತ್ತದೆ. ಹಾರ್ನ್ ಬಿಲ್ ಹಕ್ಕಿಯ ಸ್ವರೂಪ ಮತ್ತು ವೈಶಿಷ್ಟ್ಯತೆಗಳನ್ನು ವಿವರಿಸಿದ ಅವರು ಹಾರ್ನ್ ಬಿಲ್ ಹಬ್ಬ ಹಾರ್ನ್ ಬಿಲ್ ಸಂತತಿಯ ವಿಸ್ತಾರಕ್ಕೆ ಭದ್ರ ಬುನಾದಿಯಾಗಲೆಂದರು.
ಮುಖ್ಯ ಅತಿಥಿಗಳಾಗಿ ಅಂಚೆ ಇಲಾಖೆಯ ಹುಬ್ಬಳ್ಳಿ ವಲಯದ ಪ್ರಧಾನ ವ್ಯವಸ್ಥಾಪಕರಾದ ಡಾ.ವಿನೋದ್ ಕುಮಾರ್ ಮಾತನಾಡಿ ಹಾರ್ನ್ ಬಿಲ್ ಹಬ್ಬದ ಸಂದರ್ಭದಲ್ಲಿ ಅಂಚೆ ಇಲಾಖೆಯ ನೂತನ ಪೋಸ್ಟಲ್ ಕವರನ್ನು ಲೋಕಾರ್ಪಣೆಗೊಳಿಸಲು ಹೆಮ್ಮೆಯಿನಿಸುತ್ತದೆ ಎಂದ ಅವರು ಪರಿಸರ ಮತ್ತು ವನ್ಯಸಂಕುಲದ ಬಗ್ಗೆ ನಾವು ಗೌರವವನ್ನಿಟ್ಟುಕೊಳ್ಳಬೇಕೆಂದು ಕರೆ ನೀಡಿದರು.
ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಅವರು ಮಾತನಾಡಿ ದಾಂಡೇಲಿ, ಜೋಯಿಡಾ ಭಾಗದಲ್ಲಿ ಗ್ರೇಟ್ ಹಾರ್ನ್ಬಿಲ್, ಮಲಬಾರ್ ಫೈಡ್ ಹಾರ್ನ್ಬಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ಇಂಡಿಯನ್ ಗ್ರೇ ಹಾರ್ನ್ಬಿಲ್ ಪ್ರಭೇಧಗಳನ್ನು ನೋಡಬಹುದಾಗಿದ್ದು, ಇದು ಈ ಭಾಗದ ಜನತೆಯ ಸೌಭಾಗ್ಯ. ಇಲ್ಲಿಯ ವನ್ಯಸಂಕುಲ ಮತ್ತು ದಟ್ಟ ಕಾಡು ಉಳಿಸಿ, ಬೆಳೆಸುವಲ್ಲಿ ಇಲಾಖೆಯ ಜೊತೆ ಬಹುಮುಖ್ಯ ಪಾತ್ರ ಸ್ಥಳೀಯ ಜನತೆಯದ್ದಾಗಿದೆ ಎಂದ ಅವರು ಇಲ್ಲಿಯ ಹಾರ್ನ್ಬಿಲ್ ಹಕ್ಕಿಗಳ ಸಂರಕ್ಷಣೆಯೆ ಈ ಹಬ್ಬದ ಮೂಲ ಆಶಯವಾಗಿದೆ ಎಂದರು.
ಕಾರ‍್ಯಕ್ರಮದಲ್ಲಿ ಶಿರಸಿ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀದರ್.ಡಿ.ಭಟ್, ಅರಣ್ಯ ಇಲಾಖೆಯಲ್ಲಿ ಶ್ಲಾಘನಾರ್ಹ ಸಾಧನೆ ಮಾಡಿದ ಉಪ ವಲಯಾರಣ್ಯಾಧಿಕಾರಿಗಳಾದ ಅಡವೆಪ್ಪ ದೊಡ್ಮಣಿ, ಪರಶುರಾಮ ಭಜಂತ್ರಿ, ಹಾಗೂ ರಾಮಚಂದ್ರ ಮೇಗನಿ, ಮಾರುತಿ ಮಾಚಕ್, ಸೈಯದಾಲಿ ಅಲ್ಲಭಕ್ಷ ದುಕಂದಾರ, ಗಣೇಶ್ ಮಹೇಶ್ ಶಿಲಿಕ್ಯಾತರ್, ಇಮ್ರಾನ್ ಪಟೇಲ್ ಮೊದಲಾದವರನ್ನು ಸನ್ಮಾನಿಸಲಾಯ್ತು. ಹಾರ್ನ್ಬಿಲ್ ಹಬ್ಬದ ನಿಮಿತ್ತ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ‍್ಯಕ್ರಮದಲ್ಲಿ ಹಳಿಯಾಳ ಅರಣ್ಯ ಉಪ ವಿಭಾಗದಲ್ಲಿರುವ ಚಿಟ್ಟೆಗಳು ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ.ಕೆ.ವಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಮಾನಸಾ ವಾಸರೆ ಪ್ರಾರ್ಥನೆ ಗೀತೆ ಹಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ.ಎಚ್.ಸಿಯವರು ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯ್ಕ ವಂದಿಸಿದರು.
ಸಭಾ ಕಾರ‍್ಯಕ್ರಮದ ಮೊದಲು ನಗರ ಸಭೆಯಿಂದ ಹಾರ್ನ್ಬಿಲ್ ಸಭಾಭವನದವರೆಗೆ ಜಾಗೃತಿ ಮೂಡಿಸುವ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಹಾರ್ನ್ಬಿಲ್ ಹಕ್ಕಿಯ ಟ್ಯಾಬ್ಲೋ ಎಲ್ಲರ ಆಕರ್ಷಣೆಗೆ ಪಾತ್ರವಾಯ್ತು. ಸಿದ್ದಿ ಕುಣಿತ, ಡಮಾಮಿ ನೃತ್ಯ, ಕುಣಬಿ ನೃತ್ಯ, ಜೋಯಿಡಾದ ಸಹ್ಯಾದ್ರಿ ಕಲಾ ತಂಡದಿಂದ ನಡೆದ ರೂಪಕ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಾರ್ನ್ಬಿಲ್ ಸಭಾಭವನದ ಮುಂಭಾಗದಲ್ಲಿ ವಸ್ತು ಪ್ರದರ್ಶನ ಮಳಿಗೆಗಳು ಕಾರ‍್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಕಾರ‍್ಯಕ್ರಮದ ಯಶಸ್ಸಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಶ್ರಮಿಸಿದ್ದರು.