ಯಲ್ಲಾಪುರ: ‘ಪರಸ್ಪರ ಎಂಬ ಶಬ್ದವೇ ಸಹಕಾರಿ ಸಂಘಗಳ ಮೂಲವಾಗಿದೆ. ಸಂಘದಿಂದ ಗ್ರಾಹಕರಿಗೆ, ಗ್ರಾಹಕರಿಂದ ಸಂಘಕ್ಕೆ ವ್ಯಾಪಾರ ವ್ಯವಹಾರಗಳು ನಿರಂತರವಾದಾಗ ಪರಸ್ಪರ ಏಳಿಗೆಯನ್ನು ಕಾಣಬಹುದು’ ಎಂದು ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ಉಮ್ಮಚಗಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ‘ನಮ್ಮ ಸಹಕಾರಿ ಸಂಘಗಳು ಯುವ ಜನತೆಗೆ ಅವಕಾಶಗಳನ್ನು ಒದಗಿಸುವತ್ತ ಯೋಜನೆಗಳನ್ನು ರೂಪಿಸಿಕೊಂಡರೆ ಜನ ಸಾಮಾನ್ಯರ ಜೀವನ ಉತ್ತಮವಾಗುತ್ತದೆ’ ಎಂದು ನುಡಿದರು.
‘ಸಮಾಜದ ಉಳಿವಿನ ಬಗ್ಗೆ ಎಲ್ಲೆಡೆ ಚಿಂತನೆಗಳು ನಡೆಯುತ್ತಿವೆ. ಸಮಾಜದ ಉಳಿವು ಸಂಸಾರವನ್ನು ಉಳಿಸುವ ಮೂಲಕ ಆಗಬೇಕಿದೆ. ಮನೆಯೊಳಗೆ 5 ದೇವರು, ಮನೆ ಮುಂದೆ 5 ಕೃಷಿಗಳು ಒಟ್ಟಿಗೆ ಬೇಕು. ಅಂದಾಗ ಮಾತ್ರ ಜೀವನ ಸಾಧ್ಯ.ನಾವು ಕೇವಲ ಒಂದು ಬೆಳೆಯ ಮೇಲೆ ಅವಲಂಬಿತರಾದರೆ, ಮುಂದಿನ ಭವಿಷ್ಯದ ಕುರಿತು ಚಿಂತಿಸುವಂತೆ ಆಗುತ್ತದೆ. ಆಧುನಿಕ ಸಮಾಜವು ಕೃಷಿಯಿಂದ ದೂರವಾಗುತ್ತಿದೆ. ನಮ್ಮ ಊರು ಸ್ವರ್ಗದಂತೆ. ಅದನ್ನು ತೊರೆದು ಹೊರ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಯ ಜಮೀನುಗಳು ಪರಭಾರೆಯಾದರೆ, ನಾವು ಅತ್ಯಂತ ದುಷ್ಪರಿಣಾಮಗಳನ್ನು ಎದರಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಕ್ಯಾಂಪೋ ನಿರ್ದೇಶಕ ಶಂಭುಲಿಂಗ ಹೆಗಡೆ ಮಾತನಾಡಿ, ‘ಸಂಸ್ಕೃತಿ ಎನ್ನುವುದು ನಮ್ಮೆಲ್ಲರ ಜೀವನಾಡಿಯಲ್ಲಿದೆ. ಇಂತಹ ಸುಸಂಸ್ಕೃತ ಸದಸ್ಯರು ಸಹಕಾರಿ ಸಂಘಗಳ ಏಳ್ಗೆಗೆ ನೇರ ಕಾರಣಿಕರ್ತರು, ಕೂಲಿಕಾರರ ಕೊರತೆ, ಮಕ್ಕಳ ವಲಸೆ ಈ ಎಲ್ಲಾ ಪರಿಸ್ಥಿತಿಯ ನಡುವೆ ನಮ್ಮ ಪರಂಪರೆಯನ್ನು ನಮ್ಮ ಕೃಷಿ ಹಾಗೂ ಜೀವನ ಶೈಲಿಯನ್ನು ಬೆಳೆಸಿಕೊಂಡು ಹೋಗುವುದು ಕಷ್ಟ. ದೇಶದೆಲ್ಲೆಡೆ ಅಡಕೆ ಬೆಳೆಯಲಾಗುತ್ತಿರುವುದರಿಂದ ಮುಂದಿನ ನಮ್ಮಭಾಗದ ಕೃಷಿಕರ ಬದುಕು ಕಷ್ಟವಾಗಿದ್ದು, ಈ ಕುರಿತು ಎಚ್ಚೆತ್ತು ಮಿಶ್ರ ಬೆಳೆಯ ಕುರಿತು ಯೋಚಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.
ಮಾತಾ ಬ್ಯಾಂಕ್ ನ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಮಾತನಾಡಿ, ‘ಉಮ್ಮಚಗಿ ಸಂಸ್ಥೆಯು ಜಿಲ್ಲೆಯ ಒಂದು ಮಾದರಿ ಸಂಸ್ಥೆಯಾಗಿ ಬೆಳೆದಿದೆ. ಅದರ ಹಿಂದೆ ಅಧ್ಯಕ್ಷರಾದ ಎಂ.ಜಿ. ಹೆಗಡೆ ಹಾಗೂ ಎಲ್ಲಾ ಸದಸ್ಯರ ಪರಿಶ್ರಮ ಅಪಾರ’ ಎಂದರು.
ಸಂಘದ ಅಧ್ಯಕ್ಷ ಎಂ.ಜಿ. ಭಟ್ ಸುಂಕದಗುಂಡಿ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತಾ ಬ್ಯಾಂಕ್ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಹಾಗೂ ಕ್ಯಾಂಪೋ ನಿರ್ದೇಶಕ ಶಂಭುಲಿಂಗ ಹೆಗಡೆ ಮತ್ತು ಸಂಘದಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಹಾಗೂ ನೂತನ ಕಟ್ಟಡ ವಿನ್ಯಾಸಗೊಳಿಸಿದ ವಸಂತ ಭಟ್, ಶ್ಯಾಮ ಭಟ್ ಹಾಗೂ ಟಿ.ಎಸ್. ಭಟ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸಂಘದ ಮಾಜಿ ಅಧ್ಯಕ್ಷ ಎನ್.ಜಿ. ಹೆಗಡೆ ಭಟ್ರಕೇರಿ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಪಿ. ಹೆಗಡೆ ಚವತ್ತಿ ಇದ್ದರು. ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಘ್ನೇಶ್ವರ ಭಟ್ಟ ಮತ್ತು ಸವಿತಾ ಹೆಗಡೆ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಆರ್.ಎಸ್. ಹೆಗಡೆ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿಕೊಂಡರು. ನಂತರ ಕಚೇರಿಯ ಕಟ್ಟಡದಲ್ಲಿ ಸಂಘದ ಮಾಜಿ ಅಧ್ಯಕ್ಷರ ಭಾವಚಿತ್ರಗಳನ್ನು ಶ್ರೀಗಳು ಅನಾವರಣಗೊಳಿಸಿದರು.