ಸಿದ್ದಾಪುರ: ಪಟ್ಟಣದಲ್ಲಿ ಫೆ.17,18,19 ಮೂರು ದಿನಗಳ ಕಾಲ ಸಿದ್ದಾಪುರ ಉತ್ಸವ-2023 ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರಚಾರ ಒದಗಿಸುವದರ ಜೊತೆಗೆ ಸಾರ್ವಜನಿಕರಿಗೆ ಸದಭಿರುಚಿಯ ಮನರಂಜನೆ ಒದಗಿಸುವ ಉದ್ದೇಶದಿಂದ ಫೆ.17,18 ಮತ್ತು 19ರಂದು ಪಟ್ಟಣದ ನೆಹರೂ ಮೈದಾನದಲ್ಲಿ ಸಿದ್ದಾಪುರ ಉತ್ಸವ ಆಯೋಜಿಸಲಾಗಿದೆ.
ಇದು ತಾಲೂಕಿನ ಉತ್ಸವ. ಎಲ್ಲ ಸಮುದಾಯ, ಧರ್ಮದವರು ಒಟ್ಟಾಗಿ 3 ದಿನಗಳ ಕಾಲ ಉತ್ಸಾಹದಿಂದ ಉತ್ತಮ ಕಾರ್ಯಕ್ರಮ ಆಚರಿಸಲು ಮುಂದಾಗಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಪ್ರತಿದಿನ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ತಾಸು ಅವಕಾಶ ಒದಗಿಸಿ, ಅವುಗಳಲ್ಲಿ ಉತ್ತಮ ಕಾರ್ಯಕ್ರಮಕ್ಕೆ ಸಭಾಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. ಸ್ತ್ರೀ ಶಕ್ತಿ, ಯುವಕ-ಯುವತಿ ಸಂಘಗಳ ಪ್ರತಿಭಾನ್ವಿತರಿಗೆ ಅವಕಾಶ ನೀಡಲಾಗುವದು.ಹೊರಗಿನ ಉತ್ತಮ ಕಲಾವಿದರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಪ್ರತಿದಿನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವದು. ಉತ್ಸವದಲ್ಲಿ ಗೃಹ ಕೈಗಾರಿಕೆ, ಬೆಳೆಗಳ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಲಾಗುವದು. ಸ್ಥಳೀಯವಾದ ಗುಂಪು ಕ್ರೀಡೆ,ಸಂಗೀತ ಕುರ್ಚಿ ಮುಂತಾದ ಕ್ರೀಡೆಗಳು, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಜನಪ್ರತಿನಿಧಿಗಳಿಗೆ ಪ್ರತ್ಯೇಕ ಕ್ರೀಡೆಗಳನ್ನ ನಡೆಸಲಾಗುತ್ತಿದ್ದು ಛದ್ಮವೇಷ, ಸಂಗೀತ ಸ್ಪರ್ಧೆ ನಡೆಸಲಾಗುವದು. ತಾಲೂಕಿನ ಎಲ್ಲ ಗ್ರಾಪಂ ಅಧ್ಯಕ್ಷರು,ಸದಸ್ಯರುಗಳನ್ನುಈ ಕುರಿತು ಸಂಪರ್ಕಿಸಲಾಗುವದು.
ಮೊದಲೆರಡು ದಿನ ಸಂಜೆ 5ರಿಂದ, ಕೊನೆಯ ದಿನ ಬೆಳಗಿನಿಂದ ಈ ಎಲ್ಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ನಾವು ಯಾರಿಗೂ ತೊಂದರೆ ಕೊಟ್ಟು ದೇಣಿಗೆ ಪಡೆಯುವದಿಲ್ಲ. ಆರ್ಥಿಕ ಸಹಾಯ ಮಾಡಲು ಮುಂದಾದವರಿಂದ ಸ್ವೀಕರಿಸುತ್ತೇವೆ ಎಂದು ಕೆ.ಜಿ.ನಾಯ್ಕ ಸ್ಪಷ್ಟಪಡಿಸಿದ್ದಾರೆ.