ಶಿರಸಿ: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶ ಭಾರತ ಎಂದು ಘೋಷಣೆಯಾಗಿದೆ. ಭಾರತದಲ್ಲಿ ಶೇಕಡ 50ರಷ್ಟು ಯುವಜನರಿದ್ದಾರೆ. ಭಾರತ ಒಂದು ಪ್ರಜಾಪ್ರಭುತ್ವ ದೇಶ. ಇಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮತದಾನದ ಹಕ್ಕನ್ನು ಒದಗಿಸಿದೆ. ಪ್ರಜಾಪ್ರಭುತ್ವ ಆಡಳಿತ ಎಂಬುದು ಸೌಂದರ್ಯ, ನ್ಯಾಯಸಮ್ಮತವಾದ ಅತ್ಯುತ್ತಮ ಆಡಳಿತ ಪದ್ಧತಿ ಎಂದು ಕಾರ್ಯಕ್ರಮದ ಅಧ್ಯಕ್ಷರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಎನ್. ಭಟ್ ಹೇಳಿದರು.
ಅವರು ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮೂರನೇ ದಿನದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಮತವು ಕೂಡಾ ದೇಶದ ಆಗುಹೋಗುಗಳಿಗೆ, ಬೆಳವಣಿಗೆಗೆ ಎಲ್ಲದಕ್ಕೂ ಪ್ರಮುಖವಾಗಿ ಕಾರಣವಾಗುತ್ತದೆ. ನಮ್ಮ ದೇಶದ ಗರಿಮೆ ಹಿರಿಮೆ ಎಲ್ಲವೂ ಕೂಡ ನಾವು ಆರಿಸುವ ಪ್ರತಿನಿಧಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಪ್ರತಿನಿಧಿಯನ್ನು ಪ್ರತಿಯೊಬ್ಬ ವ್ಯಕ್ತಿ ಮತ ಚಲಾಯಿಸಿ ಆರಿಸುವ ಅವಕಾಶ ನಮ್ಮ ಭಾರತ ದೇಶದಲ್ಲಿದೆ. ಇಂದಿನ ಪ್ರಜಾಪ್ರಭುತ್ವ ಆಡಳಿತದ ಸ್ಥಿತಿ ಹೇಗಿದೆ ಎಂದರೆ ಯಾರು ಗರಿಷ್ಠ ಮಿತಿಯ ಜನರನ್ನು ಹೊಂದಿದ್ದಾರೆ ಎನ್ನುವುದು ಅಷ್ಟೇ ಮುಖ್ಯ ಹೊರತು ಎಷ್ಟು ಬಲ್ಲವರಿದ್ದಾರೆ ಎಂಬುದು ಮುಖ್ಯವಲ್ಲ. ರಾಷ್ಟ್ರದ ಹಿತದೃಷ್ಟಿಯನ್ನು ಅರಿತು ಯುವಜನರು ಇಡೀ ದೇಶವನ್ನೇ ಬದಲಾಯಿಸಬಹುದು ಎಂದು ಎನ್ಎಸ್ಎಸ್ ನ ಸ್ವಯಂಸೇವಕರಿಗೆ ತಮ್ಮಲ್ಲಿರುವ ಶಕ್ತಿ ಮತ್ತು ತಮ್ಮ ಮತದಾನದ ಕುರಿತು ಅರಿವು ಮೂಡಿಸಿದರು.
ಎನ್ಎಸ್ಎಸ್ ನ ಸಂಚಾಲಕರಾದ ಆರ್.ಆರ್. ಹೆಗಡೆ ಮತ್ತು ಚಿನ್ಮಯಿ ಹೆಗಡೆ ಹಾಗೂ ಪ್ರೀತಿ ಭಂಡಾರಿ ಉಪಸ್ಥಿತರಿದ್ದರು. ಭರತ್ ಸ್ವಾಗತಿಸಿ, ನಿರೂಪಿಸಿದರು. ಶ್ರದ್ಧಾ ವಂದಿಸಿದರು.