ಕಾರವಾರ: ಪರೇಶ್ ಮೇಸ್ತ ಪ್ರಕರಣದಲ್ಲಿ ಸಿಲುಕಿಕೊಂಡು ಕೋರ್ಟ್ ಕಚೇರಿ ಅಲೆಯುತ್ತಿರುವ ಬಡ ಹಿಂದುಳಿದ ವರ್ಗದ ಯುವಕರು ಇಂದು ತಮಗಾದ ಅನ್ಯಾಯದ ಬಗ್ಗೆ ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿ, ಸಮಾಜದ ಕಣ್ಣು ತೆರೆದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ .ಶಂಭು ಶೆಟ್ಟಿ ಪ್ರತಿಭಟಿಸಿದ ಯುವಕರನ್ನು ಅಭಿನಂದಿಸಿದ್ದಾರೆ.
ಹೊನ್ನಾವರದಲ್ಲಿ ಪರೇಶ್ ಮೇಸ್ತ ಪ್ರಕರಣ ನಡೆದಾಗ ಹಲವಾರು ಕ್ರಿಮಿನಲ್ ಪ್ರಕರಣ ಗಳಲ್ಲಿ ಸಿಲುಕಿಹಾಕಿ ಕೊಂಡು ಇಂದು ಕೋರ್ಟ್ ಕಚೇರಿ ಅಲೆೆಯುತಿದ್ದಾಗ ಅಂದು ಗಲಭೆ ಮಾಡಲು ಪ್ರಚೋದಿಸಿದ ಸಂಘ ಪರಿವಾರದ ಯಾವೊಬ್ಬ ನಾಯಕನೂ ತಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂದು ಆರೋಪಿಸಿ ನೊಂದ ಯುವಕರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಹೊನ್ನಾವರದಲ್ಲಿ ಪ್ರತಿಭಟಿಸಿದ್ದಾರೆ. ಸಂಘ ಪರಿವಾರ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಅನುಷ್ಟಾನಕ್ಕೆ ತರಲು ಬಡ ಹಿಂದುಳಿದ ಯುವಕರಿಗೆ ಧರ್ಮದ ಅಮಲು ಲೇಪಿಸಿ ಹಿಂಸಾಚಾರಕ್ಕೆ ತೊಡಗಿಸುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಪರೇಶ್ ಮೇಸ್ತ ಪ್ರಕರಣದಲ್ಲೂ ಧರ್ಮ ಮತ್ತು ಜಾತಿಯ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದರು.
ಆದರೆ ಇವರ ಮಾತಿಗೆ ಮರುಳಾದ ಹಿಂದುಳಿದ ಜಾತಿಯ ಯುವಕರು ಕೋರ್ಟ್ ಕಚೇರಿ ಎಂದು ಅಲೆದಾಡುತ್ತಾ ತಮ್ಮ ಭವಿಷ್ಯವನ್ನೇ ಕಳೆದುಕೊಂಡಿದ್ದಾರೆ. ಕೊನೆಗೂ ಹೊನ್ನಾವರದ ನೊಂದ ಯುವಕರು ಎಚ್ಚೆತ್ತುಕೊಂಡು ತಮ್ಮ ಸಹಾಯಕ್ಕೆ ಬಾರದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ಕೇವಲ ಹೊನ್ನಾವರಕ್ಕೆ ಸೀಮಿತವಾಗಿರದೆ ಇಡೀ ಕರಾವಳಿ ಬಾಗದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಬಡ ಹಿಂದುಳಿದ ಜಾತಿ ಯುವಕರು ಜಾಗೃತರಾಗಬೇಕು ಎಂದು ಶಂಭು ಶೆಟ್ಟಿ ತಿಳಿಸಿದ್ದಾರೆ.