ಶಿರಸಿ: ತಾಲೂಕಿನ ಸಾಲ್ಕಣಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಶೀಗೆಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.24ರಂದು ಆಯೋಜಿಸಲಾಗಿತ್ತು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಮತ್ತು ಊರಿನ ಎಲ್ಲಾ ಪೋಷಕ ಪಾಲಕರ ಸಹಕಾರದಿಂದ ಶಾಲೆಯಲ್ಲಿ ಉತ್ತಮ ವೇದಿಕೆ ನಿರ್ಮಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣಗೊಂಡು ಕಲಿಕಾ ಹಬ್ಬ ಎಂಬ ನಿತ್ಯೋತ್ಸವ ನಡೆಯಿತು. ಮಗುವಿಗೆ ಕಲಿಕೆಯೇ ಒಂದು ಹಬ್ಬವಾಗುವ ನಿಟ್ಟಿನಲ್ಲಿ ಹಾಡು-ಆಡು, ಮಾಡು-ಆಡು, ಊರು ಸುತ್ತೋಣ, ಕಾಗದ ಕತ್ತರಿ ಬಣ್ಣ ಎಂಬ ಕಲಿಕೆಯ ಕಾರ್ನರಗಳಲ್ಲಿ ಮಕ್ಕಳು ಅನುಭವಿಸಿ ಚಟುವಟಿಕೆಗಳನ್ನು ಮಾಡಿ ಸಂಭ್ರಮಿಸಿದರು. ಕಲಿಕಾ ಹಬ್ಬ ಎಂಬ ಚೇತೋಹಾರಿ ಕಾರ್ಯಕ್ರಮದಲ್ಲಿ ಸ್ನೇಹಿತರೊಂದಿಗೆ ಸೇರಿ ಪ್ರಶ್ನೆಗಳು, ವೀಕ್ಷಣೆಗಳು, ಪ್ರಯೋಗಗಳು, ಸಂದರ್ಶನಗಳು, ಅಧ್ಯಯನಗಳನ್ನು ಮಾಡಿ ಸಂಭ್ರಮಿಸಿದರು. ಸ್ಥಳೀಯವಾಗಿ ಬೆಳೆದ ಧಾನ್ಯ , ವಾಣಿಜ್ಯ ಬೆಳೆಗಳನ್ನು ರಾಶಿ ಹಾಕಿ, ಸುಗ್ಗಿ ಹಬ್ಬದ ವೇದಿಕೆ ಸೃಷ್ಟಿ ಮಾಡಿದ್ದು ಕಾರ್ಯಕ್ರಮಕ್ಕೆ ಶೋಭೆ ತರುವಂತಿತ್ತು.
ಇಂತಹ ಒಂದು ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪೂರ್ಣಕುಂಭ ಸ್ವಾಗತ, ಯಕ್ಷಗಾನ ಕಲಾಜಾತ ಮೂಲಕ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ ಶಿರಸಿ ಆಗಮಿಸಿದ್ದು ಸಂಘಟನೆ, ಆಯೋಜನೆ ಕುರಿತು ಹರ್ಷ ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಯ ಭಟ್ಟ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರವಿ ಬೆಂಚಳ್ಳಿ, ಶಿಕ್ಷಣ ಸಂಯೋಜಕರಾದ ಎಂ.ಕೆ. ನಾಯ್ಕ, ಬಿ.ಆರ್.ಪಿ. ಗಳಾದ ಶ್ರೀಧರ ನಾಯ್ಕ, ದೀಪಕ್ ಗೋಕರ್ಣ, ಮೇಲಿನ ಓಣಿಕೇರಿ ಗ್ರಾಮ ಪಂಚಾಯತ ಸದಸ್ಯರಾದ ಮಹಾಬಲೇಶ್ವರ ಹೆಗಡೆ ಶಾಲೆಯ ಹಳೆಯ ಅಧ್ಯಕ್ಷರುಗಳಾದ ತಿರುಮಲೇಶ್ವರ ಹೆಗಡೆ, ಗುರುಪಾದ ಹೆಗಡೆ, ವಿಶ್ವನಾಥ ಹೆಗಡೆ, ಕೇಶವ ಹೆಗಡೆ, ಪ್ರಶಾಂತ ಹೆಗಡೆ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಶ್ರೀಮತಿ ನಾಗರತ್ನ ಡಿ. ಸಿ.ಆರ್.ಪಿ. ಸ್ವಾಗತಿಸಿದರು. ಪ್ರವೀಣ ನಾಯ್ಕ, ನಿರೂಪಿಸಿದರೆ, ಸವಿತಾ ಶೆಟ್ಟಿ ವಂದಿಸಿದರು.