Slide
Slide
Slide
previous arrow
next arrow

ಸಣ್ಣಪುಟ್ಟ ಟೀಕೆಗಳನ್ನು ನಗುಮೊಗದಿಂದ ಸ್ವಾಗತಿಸುತ್ತೇವೆ: ಸಚಿವ ಪೂಜಾರಿ

300x250 AD

ಕಾರವಾರ: ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಯವರು ಚುನಾವಣೆ ಸಮಯದಲ್ಲಿ ಬಿಜೆಪಿಯನ್ನ ಹೊಗಳುವುದು ಸಾಧ್ಯವಿದೆಯೇ? ಸಣ್ಣಪುಟ್ಟ ಟೀಕೆಗಳನ್ನ ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಇದು ಅನಿವಾರ್ಯ. ನಗುಮೊಗದಿಂದ ಅವರ ಟೀಕೆಯನ್ನ ಸ್ವಾಗತ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚುನಾವಣೆ ಹಿನ್ನಲೆ ಪ್ರಧಾನಿ ಮೋದಿ ಆಗಮಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವಾಗ ಟೀಕೆ ಮಾಡುವುದು, ಸರ್ಕಾರದ ಕಿವಿ ಹಿಂಡುವ, ಸರ್ಕಾರದ ಮೇಲೆ ಆರೋಪ ಮಾಡುವ ಸಂಪ್ರದಾಯಗಳಿವೆ. ಅದನ್ನಷ್ಟೇ ಅವರು ಮಾಡುತ್ತಿದ್ದಾರೆ. ಹಾಗಾಗಿ ಇದಕ್ಕೆ ಗಂಭೀರವಾದ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
ಯತ್ನಾಳ್ ಹಾಗೂ ಇತರ ಸಚಿವರುಗಳ ನಡುವಿನ ಜಟಾಪಟಿಯ ಕುರಿತು ಮಾತನಾಡಿದ ಅವರು, ಒಂದೆರಡು ಸದಸ್ಯರಿರುವ ಮನೆಯಲ್ಲಿ ಇಂತಹ ಗೊಂದಲಗಳು ಇರುವುದಿಲ್ಲ. ದೊಡ್ಡ ಕುಟುಂಬದಲ್ಲಿ ಸಣ್ಣ ಸಣ್ಣ ಚರ್ಚೆಗಳು ಇರುವುದು ಸಹಜ. ರಾಜಕಾರಣದಲ್ಲಿ ಗುಡುಗು- ಸಿಡಿಲು ಇರುತ್ತೆ, ಕಡೆಗೆ ತೊಪ್ಪನೆ ಮಳೆ ಬರುತ್ತೆ, ಇದೆಲ್ಲ ರೂಢಿ ಸಂಪ್ರದಾಯಗಳು. ಯಾರಿಗೆ ಎಲ್ಲಿ, ಏನು ಹೇಳಬೇಕೋ ಅದನ್ನ ನಮ್ಮ ಹಿರಿಯರು ಹೇಳಿದ್ದಾರೆ. ಎಲ್ಲರೂ ಇಡೀ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಗೆಲುವಿನ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ, ನಾವೆಲ್ಲರೂ ಗೆಲ್ಲುತ್ತೇವೆ. ಸಣ್ಣಪುಟ್ಟ ಸಮಸ್ಯೆಗಳಿದ್ರೆ ಸರಿಯಾಗತ್ತೆ, ಸರಿ ಮಾಡ್ತೇವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಸಮುದಾಯಗಳು ತಮಗೆ ಮೀಸಲಾತಿ ನೀಡುವಂತೆ ಕೇಳುವುದು ಅವರ ಹಕ್ಕು. ಅವರ ಬೇಡಿಕೆಗಳನ್ನ, ಭಾವನೆಗಳನ್ನ ಅರ್ಥ ಮಾಡಿಕೊಂಡು ಹಿಂದುಳಿದ ವರ್ಗಗಳ ಆಯೋಗ 2ಡಿ ಎನ್ನುವ ಹೊಸ ಕಲ್ಪನೆ ನೀಡಿದೆ. ಒಕ್ಕಲಿಗರು, ವೀರಶೈವ ಲಿಂಗಾಯಿತರನ್ನ 2ಡಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಗಳು ಕೇಳಿಬಂದಿವೆ. ನಿಯಮಗಳಡಿ ಸೇರ್ಪಡೆ ಸಾಧ್ಯತೆಗಳ ಕುರಿತು ಪರಿಶೀಲನೆಗೆ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಿದೆ. ಇದರ ಅನ್ವಯ ಪರಿಶೀಲಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಅಂತಿಮವಾಗಿ ಸರಿಯಾದ ಸಮಯಕ್ಕೆ ಎಲ್ಲರೂ ಒಪ್ಪುವಂತಹ ನಿರ್ಧಾರವನ್ನ ಸರ್ಕಾರ ಕೈಗೊಳ್ಳಲಿದೆ ಎಂದು 2ಡಿ ಮೀಸಲಾತಿ ಸೇರ್ಪಡೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ನಾಳೆಯಿಂದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ
ಜನವರಿ 21ರಿಂದ 29ರವರೆಗೆ ಬಿಜೆಪಿ ವಿಜಯ ಸಂಕಲ್ಪ ಅಭಿಯಾನವನ್ನ ಹಮ್ಮಿಕೊಂಡಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ವಿಜಯಪುರದ ಸಿಂಧಗಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದರು. ಈಗಾಗಲೇ ಮೊದಲ ಹಂತದ ಜನವರಿ 2 ರಿಂದ 12ರ ವರೆಗೆ ಹಮ್ಮಿಕೊಳ್ಳಲಾಗಿದ್ದ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿದೆ. ಅದರ ಮುಂದುವರೆದ ಭಾಗವಾಗಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಗಳ ಕುರಿತು ಕರಪತ್ರಗಳನ್ನ ಮನೆ ಮನೆಗೆ ಹಂಚುವ ಕಾರ್ಯ ಮಾಡಲಾಗುವುದು. ಈ ಮೂಲಕ ಸರ್ಕಾರದ ಸಾಧನೆಗಳು, ಯೋಜನೆಗಳು, ಕೈಗೊಂಡಿರುವ ಜನಪರ ಕಾರ್ಯಗಳನ್ನ ಜನರಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಜನಸಾಮಾನ್ಯರಿಗೆ ತಲುಪಬೇಕಾದಂತಹ ಯೋಜನೆಗಳ ಕುರಿತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ತಳಮಟ್ಟದಿಂದ ಜನರಿಗೆ ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಗೋಡೆಗಳ ಮೇಲೆ ಬಿಜೆಪಿ ಸಾಧನೆ ಬಿಂಬಿಸುವoತಹ ಪೇಟಿಂಗ್, ಪಕ್ಷದ ಸ್ಟಿಕರ್‌ಗಳನ್ನ ಮನೆಗಳಿಗೆ, ವಾಹನ ಚಾಲಕರುಗಳಿಗೆ ತಲುಪಿಸುವುದರೊಂದಿಗೆ ಸದಸ್ಯತ್ವ ಅಭಿಯಾನ ನಡೆಸುವುದು ಇದರ ಭಾಗವಾಗಿದೆ ಎಂದರು. ಅಲ್ಲದೇ ಈ ಬಾರಿ ಜನವರಿ 29ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಬೂತ್ ಮಟ್ಟದಿಂದ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಒಟ್ಟಿಗೆ ಕುಳಿತು ಆಲಿಸಲಿದ್ದು ಶೇಕಡಾ 90ರಷ್ಟು ಬೂತ್‌ಗಳು ಒಟ್ಟಿಗೆ ಆಲಿಸುವುದರೊಂದಿಗೆ ದಾಖಲೆ ಮಾಡಲಿವೆ ಎಂದು ಮಾಹಿತಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top