ಹೊನ್ನಾವರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ತಾಲೂಕು ಕ್ಲಸ್ಟರ್ ಮಟ್ಟದ `ಕಲಿಕಾ ಹಬ್ಬ’ ವಿಶಿಷ್ಟ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಶಾಲಾ ಮೈದಾನದಲ್ಲಿ ವಾದ್ಯದೊಂದಿಗೆ ಹೂವು ಚೆಲ್ಲಿ ಸ್ವಾಗತಿಸಿ ಶಾಲೆಯ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ವೇದಿಕೆಯಲ್ಲಿ ಆಯ್ದ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ, ಕಿರೀಟ ತೊಡಿಸಿ, ದೀಪ ಬೆಳಗಿಸಿ ಕಾರ್ಯ ಉದ್ಘಾಟಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಉಷಾ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳನ್ನು ಯೋಚನೆ, ಕಲ್ಪನೆ, ಪ್ರಜ್ನೆ ಮತ್ತು ಪ್ರಶ್ನೆ ಹೀಗೆ ನಾಲ್ಕು ಗುಂಪುಗಳನ್ನು ರಚಿಸಿ ಹಾಡು- ಆಡು, ಕಾಗದ-ಕತ್ತರಿ, ಊರು ತಿಳಿಯೋಣ, ಮಾಡು-ಆಡು ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರತಿದಿನ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ಆತ್ಮವಿಶ್ವಾಸ ಹುಟ್ಟಿಸುವ ಹಬ್ಬದ ವಾತಾವರಣವನ್ನು ಅನುಭವಿಸುತ್ತಾರೆ ಎಂದರು.
ಸoಪನ್ಮೂಲ ವ್ಯಕ್ತಿ ಪುಷ್ಪಾ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಕಲಿಕಾ ಹಬ್ಬವು ವಿಶಿಷ್ಟವಾದ ಎರಡು ದಿನಗಳ ಕಾರ್ಯಕ್ರಮವಾಗಿದ್ದು ಹೊನ್ನಾವರ ಕ್ಲಸ್ಟರ್‌ನ 10 ಪ್ರಾಥಮಿಕ ಮತ್ತು 1 ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಇದು ವಿದ್ಯಾರ್ಥಿಗಳು ಸಂಪೂರ್ಣ ಸ್ವಾತಂತ್ರ್ಯ ಮತ್ತು ನಿರ್ಭೀತ ವಾತಾವರಣದಲ್ಲಿ ಸಂತಸ ಸಡಗರವನ್ನು ಹೊಂದುವ ಕಾರ್ಯಕ್ರಮವಾಗಿದೆ. ನಾವಿನ್ಯಯುತವಾದ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಸೃಜನಾತ್ಮಕ ಅಭಿವ್ಯಕ್ತಗೊಳಿಸುತ್ತಾರೆ ಎಂದರು.
ಪ.ಪo.ಸದಸ್ಯೆ ಮೇಧಾ ನಾಯ್ಕ, ಮುಖ್ಯಾಧ್ಯಾಪಕಿ ಗೀತಾ ಚಂದಾವರ, ವಿಜಯಾ ಶೇಟ್, ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರ ನಗರೆ, ಅಕ್ಬರ ಶೇಖ್, ವನಿತಾ ನಾಯ್ಕ, ಸಿ.ಆರ್.ಪಿ ಪ್ರಕಾಶ್ ಶೇಟ್ ಮಾತನಾಡಿದರು. ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ, ಸಹಶಿಕ್ಷಕರು ಪಾಲ್ಗೊಂಡಿದ್ದರು. ನಂತರ ಕಲಿಕಾ ಹಬ್ಬದ ಹಾಡು ಹಾಡಲಾಯಿತು. ಈ ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಪ.ಪಂ.ಸದಸ್ಯೆ ಮೇಧಾ ನಾಯ್ಕ ಹಾಗೂ ಶಿಕ್ಷಕರು ಕುಣಿದು ಸಂಭ್ರಮಿಸಿದರು.