ಕಾರವಾರ: ಜಿ.ಎಸ್‌ಬಿ ಸೇವಾ ವಾಹಿನಿ ವತಿಯಿಂದ ‘ಸಮಾಜ ದಿವಸ’ ಎಂಬ ಶೀರ್ಷಿಕೆಯಡಿಯಲ್ಲಿ ವಾರ್ಷಿಕೋತ್ಸವವನ್ನು ಇತ್ತೀಚಿಗೆ ಮುರಳೀಧರ ಮಠದ ಇಂದಿರಾಕಾಂತ ಸಭಾಗೃಹದಲ್ಲಿ ಆಚರಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ದತ್ತಾತ್ರೇಯ ಪಂಡಿತ ಬರ್ಗಿ, ಹಿರಿಯ ವಕೀಲರು ಎಲ್.ಎಮ್.ಪ್ರಭು, ವಾಸ್ತುಶಿಲ್ಪಿ ಹಾಗೂ ಸಮಾಜ ಸೇವಕಿ ಸೌಮ್ಯಾ ಎಸ್.ಶಾನಭಾಗ ಉದ್ಘಾಟಕರಾಗಿ ಹಾಗೂ ಅತಿಥಿಗಳಾಗಿ ಆಗಮಿಸಿದ್ದರು. ಸಮಾರೋಪ ಕಾರ್ಯಕ್ರಮಕ್ಕೆ ಲತಾ ಕಾಮತ್ ಅವರ್ಸಾ, ನಗರಸಭಾ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಕಾರವಾರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅನಿರುದ್ಧ ಜಿ.ಹಳದೀಪುರ್ ಮತ್ತು ಸಮಾಜ ಸೇವಕರಾದ ಶುಭಾ ಶೇಟಿಯ ಅತಿಥಿಗಳಾಗಿ ಆಗಮಿಸಿದ್ದರು.
ಸದ್ರಿ ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜದ ಸುಮಾರು 35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುರಳಿಧರ ಮಠದ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಿರಿಯ ವಕೀಲರಾದ ಆರ್.ಎಸ್.ಪ್ರಭು ದಂಪತಿಗೆ ಹಾಗೂ ಮುರುಳೀಧರ ಮಠದ ಪೂಜಾರಿ ಹರಿದಾಸ ಆಚಾರ್ಯ ಮತ್ತು ಅವರ ಧರ್ಮಪತ್ನಿ ಭಾರತಿ ಆಚಾರ್ಯ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಸಂಜೆ ಸಮಾರೋಪ ಕಾರ್ಯಕ್ರಮದಲ್ಲಿ ಸಮಾಜದ ಸ್ನಾತಕೋತ್ತರ ಪದವಿಯನ್ನು ಪಡೆದ ವೈದ್ಯರಾದ ಅನುರಾಗ ಪಿಕಳೆ, ಗೋಪಾಲಕೃಷ್ಣ ಶಾನಭಾಗ ಹಾಗೂ ಪತ್ರಿಕೋದ್ಯಮದಲ್ಲಿ 9 ಬಂಗಾರದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದ ಪ್ರೀತಿ ಕಾಮತರವರಿಗೆ ಸನ್ಮಾನಿಸಲಾಯಿತು. ನಗರಸಭಾ ಅಧ್ಯಕ್ಷ ಡಾ.ನಿತಿನ್ ಪಿಕಳೆ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಜಿ.ಎಸ್.ಬಿ ಸೇವಾ ವಾಹಿನಿಯ ಅಧ್ಯಕ್ಷ ಹಾಗೂ ವಕೀಲ ರಾಮನಾಥ ವಿ.ಭಟ್, ಕಾರ್ಯದರ್ಶಿ ನಾಗರಾಜ ಜೋಶಿ, ಪದಾಧಿಕಾರಿ ರಾಜೇಶ ನಾಯಕ ಹಾಗೂ ಎಸ್.ಜಿ.ಕಾಮತ ಇದ್ದರು.