ಶಿರಸಿ: ತಾಲ್ಲೂಕಿನ ಇಸಳೂರಿನಲ್ಲಿ ರಾಜ್ಯ ಸರ್ಕಾರವು ಈಗಾಗಲೇ ನಿರ್ಮಿಸುತ್ತಿರುವ ‘ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ’, ‘ಮಲೆನಾಡು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ ಸ್ಥಾಪಿಸಬೇಕಾಗಿ ಮುಖ್ಯಮಂತ್ರಿಗಳಿಗೆ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ ಮನವಿ ಮಾಡಿದ್ದಾರೆ. ಶಿರಸಿಗೆ ಮುಖ್ಯಮಂತ್ರಿಗಳು ಅಧಿಕೃತ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಅವರು ಈ ನಿವೇದನೆ ಸಲ್ಲಿಸಿದ್ದಾರೆ.
ಇಸಳೂರಿನಲ್ಲಿ ರಾಜ್ಯ ಸರ್ಕಾರವು ’ಪ್ರಾದೇಶಿಕ ವಿಜ್ಞಾನ ಕೇಂದ್ರ’ವನ್ನು ಈಗಾಗಲೇ ನಿರ್ಮಿಸುತ್ತಿದೆ. ಈ ನಿಟ್ಟಿನಲ್ಲಿ, ಸ್ಥಳೀಯ ಶಾಸಕರೂ ಹಾಗೂ ವಿಧಾನಸಭಾ ಅಧ್ಯಕ್ಷರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನ ಹಾಗೂ ಮಾರ್ಗದರ್ಶನವು ಅಭಿನಂದನೀಯ. ಅದರ ಭಾಗವಾಗಿ, ’ಮಲೆನಾಡು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ ಒಂದನ್ನು ಅಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಸದ್ಯದಲ್ಲೇ ಮಂಡಿಸಲಿರುವ ಮುಂಬರುವ ಆರ್ಥಿಕ ವರ್ಷದ ಬಜೆಟ್ಟಿನಲ್ಲಿ ಘೋಷಿಸಬೇಕು ಎಂದು ಡಾ. ಕೇಶವ ಕೊರ್ಸೆಯವರು ತಮ್ಮ ಮನವಿಯಲ್ಲಿ ಕೋರಿದ್ದಾರೆ.