ಕುಮಟಾ: ತಾಲೂಕಿನಲ್ಲಿ ರೈತ ಸಹಕಾರಿ ಸಂಘದ ಆವರಣದಲ್ಲಿ ಮಹಿಳಾ ಸಬಲೀಕರಣ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ ವೃದ್ಧಿ ಹಾಗೂ ಪರೀಕ್ಷೆ ಪೂರ್ವ ತಯಾರಿ ಕಾರ್ಯಾಗಾರ ನಡೆಯಿತು.
ಶ್ರೀಶಕ್ತಿ ವೀರ ಮಾರುತಿ ಚಿನ್ನರ ಯಕ್ಷಗಾನ ಮಂಡಳಿ, ಸುಲಭ ಸೇವಾ ಸಂಸ್ಥೆ ಮತ್ತು ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತದ ಸಹಕಾರದಲ್ಲಿ ಹಮ್ಮಿಕೊಂಡ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ ವೃದ್ಧಿ ಮತ್ತು ಪರೀಕ್ಷಾ ಪೂರ್ವ ತಯಾರಿ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಿದೆ. ಈ ಭಾಗದ ಮಕ್ಕಳು ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಅಲ್ಲದೇ ಈ ಕಾರ್ಯಕ್ರಮದ ಕೊನೆಯವರೆಗೂ ಪಾಲ್ಗೊಂಡು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮುಖೇನ ಶಿಕ್ಷಣ ಪ್ರೇಮ ಮೆರೆದರು.
ನಿವೃತ್ತ ಪ್ರಾಂಶುಪಾಲರಾದ ನಿತ್ಯಾನಂದ ಹೆಗಡೆ ಅವರು ಮಹಿಳಾ ಸಬಲೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕುಮಟಾದ ವಕೀಲರ ಸಂಘದ ಅಧ್ಯಕ್ಷರಾದ ಮಮತಾ ನಾಯ್ಕ ಮಹಿಳಾ ಸಬಲೀಕರಣದ ಕುರಿತಾಗಿ ಉಪನ್ಯಾಸ ನೀಡಿದರು. ಪುರದಮಠದ ಅಧ್ಯಾಪಕ ಗಂಗಾಧರ ನಾಯ್ಕರವರು ವಿಧ್ಯಾರ್ಥಿಗಳಿಗೆ ಸ್ಮರಣ ಶಕ್ತಿ ವೃದ್ಧಿ ಹಾಗೂ ಪರೀಕ್ಷೆ ತಯಾರಿ ಕುರಿತಾಗಿ ಉತ್ತಮ ಮಾರ್ಗದರ್ಶನ ನೀಡಿದರು. ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವ್ಯವಸ್ಥಾಪಕರಾದ ಪ್ರೀತಿ ಗೌಡರವರು ಮಹಿಳೆಯರಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಘನಾಶಿನಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮಮತಾ ನಾಯ್ಕ ವಹಿಸಿದ್ದರು. ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷರಾದ ಮಮತಾ ನಾಯ್ಕ ಮತ್ತು ಅಧ್ಯಾಪಕ ಗಂಗಾಧರ ನಾಯ್ಕ ಅವರನ್ನು ಸುಲಭ ಸೇವಾ ಸಂಸ್ಥೆಯಿAದ ಸನ್ಮಾನಿಸಲಾಯಿತು. ಶ್ರೀ ಶಕ್ತಿ ವೀರ ಮಾರುತಿ ಚಿಣ್ಣರ ಯಕ್ಷಗಾನ ಮಂಡಳಿಯು ಸುಲಭ ಸೇವಾ ಸಂಸ್ಥೆಯ ಅಧ್ಯಕ್ಷರಾದ ದಿವಾಕರ ಅಘನಾಶಿನಿ ಅವರನ್ನು ಸನ್ಮಾನಿಸಿ, ಗೌರವಿಸಿತು.
ಕಾರ್ಯಕ್ರಮದಲ್ಲಿ ಅಧ್ಯಾಪಕ ವಿಷ್ಣು ಪಟಗಾರ, ನಿವೃತ್ತ ಪ್ರಾಂಶುಪಾಲರಾದ ನಿತ್ಯಾನಂದ ಹೆಗಡೆ, ಚಿಣ್ಣರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರಾದ ಮಾರುತಿ ನಾಯ್ಕ, ಮಂಜುನಾಥ ನಾಯ್ಕ ಇತರರು ಇದ್ದರು.