ಕಾರವಾರ: ಸಮಾಜದಲ್ಲಿ ಗಂಡು- ಹೆಣ್ಣಿನ ಸಮಾನತೆಯನ್ನು ಕಾಪಾಡಿಕೊಳ್ಳಬೇಕು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು, ತಂತ್ರಜ್ಞರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಜ.05 ರಂದು ಜರುಗಿದ ಜಿಲ್ಲಾ ಮಟ್ಟದ ಪಿ.ಸಿ&ಪಿ.ಎನ್.ಡಿ.ಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯಿದೆ) ಮತ್ತು ಕೆ.ಪಿ.ಎಮ್.ಇ ಕಾಯಿದೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂತ್ರಜ್ಞಾನದ ದುರ್ಬಳಕೆಯಿಂದ ಭ್ರೂಣ ಲಿಂಗಪಾತವನ್ನು ವಿಕೃತಗೊಳಿಸುವಲ್ಲಿ ಮಹತ್ತರವಾದ ಕಾರಣವಾಗಿದೆ. ಜಿಲ್ಲೆಯ ಅಲ್ಟ್ರಾಸೌಂಡ್ ಸೌಲಭ್ಯ ಹೊಂದಿರುವ ಎಲ್ಲಾ ಚಿಕಿತ್ಸಾಲಯಗಳು ಜನೆಟಿಕ್ ಕ್ಲಿನಿಕ್‌ಗಳು ಹಾಗೂ ಜನೆಟಿಕ್ ಪ್ರಯೋಗಾಲಯಗಳು ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಭ್ರೂಣ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಗುರುತಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಪಿ.ಎಮ್.ಇ.ಎ ನಡಿ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಕಾರ್ಯಾಚರಣೆ ಮಾಡುವ ಅಧಿಕಾರವನ್ನು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಕೆ.ಪಿ.ಎಂ.ಇ ಕಾಯ್ದೆಯ ಅಡಿಯಲ್ಲಿ ಪರವಾನಗಿ ಪಡೆಯದೇ ಚಿಕಿತ್ಸೆ ನೀಡುತ್ತಿರುವವರು ಕೂಡಲೇ ಪರವಾನಗಿ ಪಡೆಯಬೇಕು. ವೈದ್ಯಕೀಯ ಅರ್ಹತೆ ಇಲ್ಲದಿದ್ದರೂ ವೈದ್ಯ ಪದವಿ ಇಲ್ಲದೇ ಚಿಕಿತ್ಸೆ ನೀಡುವ ನಕಲಿ ವೈದ್ಯರುಗಳ ಕ್ಲಿನಿಕ್‌ಗಳಿಗೆ ಕಡಿವಾಣ ಹಾಕಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರದ ನಾಯ್ಕ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಡಿಸಿ ಕವಳಿಕಟ್ಟಿ
