ಕುಮಟಾ: ಜಿ.ಪಿ.ಎಸ್ ಮಾಡಿಕೊಂಡ ಅತಿಕ್ರಮಣದಾರರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡಿದರೆ ಅಂಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಪಟ್ಟಣದ ತಾ.ಪಂ ಸಭಾಭವನದಲ್ಲಿ ನಡೆದ ‘ಹೊಳಪು’ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು 64 ಸಾವಿರ ಅರಣ್ಯ ಅತಿಕ್ರಮಣದಾರರು ಈಗಾಗಲೇ ಆ ಭೂಮಿಯನ್ನು ನಂಬಿ ವಾಸವಿದ್ದಾರೆ. ಜಿ.ಪಿ.ಎಸ್ ನಡೆದ ಜಾಗದಲ್ಲಿ ಮನೆ, ಶೌಚಾಲಯ ಸೇರಿದಂತೆ ಇನ್ನಿತರ ಉಪಯೋಗಕ್ಕಾಗಿ ಬಳಸಿಕೊಂಡರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆದರಿಸಬಾರದು. ಇಂತಹ ಸೂಕ್ಷö್ಮ ಸಮಯದಲ್ಲಿ ಅವರಿಗೆ ಕಿರುಕುಳ ನೀಡಿದರೆ ನಾವೆಲ್ಲೂ ಬೇರೆ ಪರಿಣಾಮ ಎದುರಿಸಬೇಕಾಗುತ್ತದೆ. ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ. ಸುಪ್ರೀಂಕೋರ್ಟ್ ಆದೇಶ ಬರುವವರೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಹೊನ್ನಾವರ ತಾಲೂಕಿನ ಮಂಕಿಯ ಇಬ್ಬರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ದೂರು ಬಂದಿದೆ. ಯಾವುದೇ ಕಾರಣಕ್ಕೂ ಅವರಿಗೆ ತೊಂದರೆ ನೀಡಬಾರದು. ಅತಿಕ್ರಮಣ ಜಮೀನಿನಲ್ಲಿ ಸಣ್ಣಪುಟ್ಟ ಕಾರ್ಯ ಮಾಡಿದರೆ ಯಾಕೆ ತೊಂದರೆ ನೀಡುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೆಸ್ಕಾo ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿನೋದ ಭಾಗ್ವತ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಬೆಳಕು ಯೋಜನೆಗೆ 9,389 ಅರ್ಜಿ ಬಂದಿದ್ದು, ಅದರಲ್ಲಿ 7,216 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 1,972 ಅರ್ಜಿಗಳು ಬಾಕಿ ಉಳಿದೆ ಎಂದು ತಿಳಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೆಸ್ಕಾಂಗೆ ವಿದ್ಯುತ್ ತಂತಿ ಪೂರೈಕೆಯಾಗದ ಕಾರಣ ಬೆಳಕು ಯೋಜನೆಯ ಪ್ರಗತಿ ಕುಂಠಿತವಾಗಿದ್ದು, ಮೇಲಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರೆ ಅಧಿಕಾರಿಗಳು ಬೇಡ ಎನ್ನುತ್ತಾರೆ. ಹೀಗಾದರೆ ಸರ್ಕಾರದ ಯೋಜನೆ ಪ್ರಗತಿ ಹೇಗೆ ಸಾಧ್ಯ. ಹೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ಯಾಂಗ್‌ಮೆನ್‌ಗಳನ್ನು ನೇಮಕಗೊಳಿಸಲಾಗಿತ್ತು. ಅವರ ಅವಧಿ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡಿದೆ. ಅವರಿಗೆ 2 ತಿಂಗಳ ವೇತನ ಪಾವತಿ ಬಾಕಿ ಉಳಿದಿದ್ದು, ಅವರನ್ನು ಪುನಃ ಕರ್ತವ್ಯಕ್ಕೆ ನೇಮಕಗೊಳಿಸುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೆಸ್ಕಾಂಗೆ ಪೂರೈಕೆಯಾಗಬೇಕಾದ ವಿದ್ಯುತ್ ತಂತಿ, ವಿದ್ಯುತ್ ಪರಿವರ್ತಕಗಳನ್ನು ಪೂರೈಸಲು ಮತ್ತು ಗ್ಯಾಂಗ್‌ಮೆನ್‌ಗಳ ನೇಮಕದ ಕುರಿತು ಇಂಧನ ಸಚಿವರ ಜತೆ ಚರ್ಚಿಸಿ, ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕುಮಟಾ ಪಟ್ಟಣದ ಮಣಿಕಿ ಮೈದಾನದಲ್ಲಿ ಜ.28ರಂದು ನಡೆಯಲಿರುವ ಜಿಲ್ಲಾ ಮಟ್ಟದ ‘ಹೊಳಪು’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಹಾಗೂ ಅಧಿಕಾರಿಗಳು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಉಪರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಸೇರಿದಂತೆ ಜಿಲ್ಲಾಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.
ಜಿ.ಪಿ.ಎಸ್ ಅತಿಕ್ರಮಣದಾರರಿಗೆ ತೊಂದರೆ ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮ:ಸಚಿವ ಪೂಜಾರಿ
