ಹೊನ್ನಾವರ: ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಜಿಲ್ಲೆಯ ಪುರಸಭೆ, ಪ.ಪಂ. ಮತ್ತು ಗ್ರಾ.ಪಂ. ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಣಕಿ ಮೈದಾನದಲ್ಲಿ ಜ.28ರಂದು ಹೊಳಪು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶಕುಮಾರ ಶೆಟ್ಟಿ ತಿಳಿಸಿದರು.
ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಕಳೆದ ಆರೇಳು ವರ್ಷದಿಂದ ಕೋಟಾದಲ್ಲಿ ಹೊಳಪು ಉತ್ಸವದ ಮೂಲಕ ಪಂಚಾಯತಿ ಹಬ್ಬ ನಡೆಸುತ್ತಿದ್ದು, ಪ್ರಥಮ ಬಾರಿಗೆ ಜಿಲ್ಲೆಯ ಕುಮಟಾ ತಾಲೂಕಿನ ಮಣಕಿ ಮೈದಾನದಲ್ಲಿ ಜ.28ರಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಸಮವಸ್ತ್ರ ನೀಡುತ್ತಿದ್ದು, ಅದನ್ನು ಧರಿಸಿ ಆಕರ್ಷಕ ಪಥಸಂಚಲನ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾ ಸ್ಪರ್ಧೆಯಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆ, ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಲಘು ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ರಜನಿ ನಾಯ್ಕ, ಉಪಾಧ್ಯಕ್ಷ ಸಚಿನ ನಾಯ್ಕ, ಗ್ರಾ.ಪಂ. ಸದಸ್ಯರು, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಶ ಭಂಡಾರಿ, ಅಧಿಕಾರಿಗಳಾದ ಕೃಷ್ಣಾನಂದ, ಅಣ್ಣಪ್ಪ ಮುಕ್ರಿ, ಈರಪ್ಪ ಲಂಬಾಣಿ, ಪಂಚಾಯತಿ ಸಿಬ್ಬಂದಿ ಇದ್ದರು.