ಮಂಗಳೂರು: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿನ ಚುನಾವಣೆ ಹಾಗೂ ವಿಪರೀತ ಚಳಿಯ ವಾತಾವರಣದಿಂದಾಗಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲು ಸಾಧ್ಯವಾಗಿಲ್ಲ, ಆದರೆ ಕಳೆದೆರಡು ದಿನಗಳಿಂದ ಕೆಂಪಡಿಕೆ ದರ ಚೇತರಿಕೆ ಕಾಣುತ್ತಿದ್ದು ಸಂಕ್ರಾಂತಿ ಬಳಿಕ ಚಾಲಿ ಅಡಿಕೆಗೂ ಪೂರ್ತಿಯಾಗಿ ಬೇಡಿಕೆ ಹೆಚ್ಚಾಗಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
“ಚಳಿಗಾಲದಲ್ಲಿ ದಾಸ್ತಾನಿನ ಸಮಸ್ಯೆ ಎದುರಾಗುವುದರಿಂದ ಸಾಮಾನ್ಯವಾಗಿ ಪಾನ್ ಮಸಾಲಾ ಕಂಪೆನಿಗಳು ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ ಮಾಡುವುದಿಲ್ಲ, ಹಾಗಾಗಿ ಈ ಸಮಯದಲ್ಲಿ ಅಡಿಕೆಗೆ ಬೇಡಿಕೆ ಕುಸಿತ ಸಾಮಾನ್ಯವಾಗಿದ್ದು ಇದರ ಪರಿಣಾಮ ಕರಾವಳಿ ಭಾಗದ ಚಾಲಿ ಅಡಿಕೆಯ ಮಾರುಕಟ್ಟೆಯನ್ನೂ ಬಾಧಿಸುತ್ತದೆ.
ಕಳೆದ ಒಂದು ತಿಂಗಳಿಂದ ತೀವ್ರ ಕುಸಿತ ಕಂಡಿದ್ದ ಕೆಂಪಡಿಕೆ ದರ ಎರಡು ದಿನಗಳಿಂದ ಚೇತರಿಸಿಕೊಳ್ಳುತ್ತಿದ್ದು ಉತ್ತರ ಭಾರತದ ವರ್ತಕರಿಂದಲೂ ಉತ್ತಮ ಬೇಡಿಕೆ ಬರುತ್ತಿದೆ. ಕಳೆದ ಎರಡು ತಿಂಗಳಿಗೂ ಮೇಲ್ಪಟ್ಟು ಚಾಲಿ ಅಡಿಕೆ ಉತ್ತರ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರವಾನೆಯಾಗಿಲ್ಲದಿರುವುದರಿಂದ, ಅಲ್ಲಿ ಚಾಲಿ ಅಡಿಕೆ ದಾಸ್ತಾನು ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿದೆ. ಹಾಗಾಗಿ ರೈತರು ಗಾಳಿ ಸುದ್ದಿ ಹಾಗೂ ಖಾಸಗಿ ವರ್ತಕರ ಬೆದರಿಕೆಗಳಿಗೆ ಕಿವಿಗೊಡುವ ಆವಶ್ಯಕತೆಯಿಲ್ಲ. ಹಣದ ಅವಶ್ಯಕತೆ ಇರುವಷ್ಟೇ ಪ್ರಮಾಣದಲ್ಲಿ ಅಡಿಕೆ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ ಚೇತರಿಕೆಯ ಲಾಭದ ಸದುಪಯೋಗ ಪಡೆಯಬಹುದು” ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಅಡಿಕೆ ಬೆಳೆಯ ಮೇಲೆ ಚಳಿಯ ಪರಿಣಾಮ: ರೈತರಿಗೆ ಕ್ಯಾಂಪ್ಕೊ ಮಾಹಿತಿ
