ಕಾರವಾರ: ಸಾರ್ವಜನಿಕರಿಂದ ಬಂದoತಹ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿಗೊಳಿಸಿ ಅಥವಾ ಮರುಪರಿಶೀಲಸಿ ಅನುಮೋದನೆ ನೀಡಿ. ಕಾರಣಗಳನ್ನು ನೀಡದೇ ಕೆಲಸ ಬೇಗ ಮುಗಿಸಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಖಂಡೂ ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾಲೋಚಕರ ಸಮಿತಿ ಮತ್ತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಬ್ಯಾಂಕುಗಳು ಸರ್ಕಾರ ಕೈಗೊಳ್ಳುವ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ನೀಡುವ ಸಾಲವನ್ನು ಪರಿಶೀಲಿಸುವಂತೆ ಮತ್ತು ಕೃಷಿ, ಮೀನುಗಾರಿಕೆ, ಪಶುಪಾಲನೆ ಇಲಾಖೆಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದು, ಇವುಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಿಎಮ್‌ಎಫ್ ಎಮ್‌ಇ ಯೋಜನೆಯಡಿ ಒಟ್ಟು 42 ಅರ್ಜಿಗಳು ಬಂದಿದ್ದು, 38 ಅರ್ಜಿಗಳನ್ನು ಅನುಮೋದನೆ ನೀಡಲಾಗಿದೆ. ಪಶುಪಾಲನಾ ಇಲಾಖೆಯಿಂದ ಒಟ್ಟು 3886 ಅರ್ಜಿಗಳು ಬಂದಿದ್ದು, 1073 ಅನುಮೋದನೆಗೊಂಡಿವೆ. ಮೀನುಗಾರಿಕಾ ಇಲಾಖೆಯಿಂದ ಒಟ್ಟು 3785 ಅರ್ಜಿಗಳಲ್ಲಿ 1902 ಅನುಮೋದನೆಗೊಂಡಿವೆ. ಪಿಎಂ ಸ್ವನಿಧಿ ಫೇಸ್ 2 ಯೋಜನೆಯಡಿ 2252 ಅರ್ಜಿಗಳು ಬಂದಿದ್ದು, 922 ಅರ್ಜಿಗಳು ಅನುಮೋದನೆಗೊಂಡಿವೆ ಎಂಬುದನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೆಜರ್ ರುದ್ರೇಶ್, ನಬಾರ್ಡ್ ಬ್ಯಾಂಕಿನ ಡಿಡಿಎಮ್ ರೇಜಿಸ್ ಇಮ್ಯಾನುವಲ್, ಜಿ.ಪಂ ಪಿ.ಡಿ.ಕರೀಮ್ ಅಸಾದಿ ಹಾಗೂ ಜಿಲ್ಲೆಯ ಎಲ್ಲ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.