ಶಿರಸಿ: ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ಜ.01, ಭಾನುವಾರ ಬೆಳಿಗ್ಗೆ 9.30ರಿಂದ ಪಂ.ಪ್ರಭಾಕರ್ ಭಟ್ ಕೆರೆಕೈರವರ ಜನ್ಮ ಅಮೃತಮಹೋತ್ಸವ ನಿಮಿತ್ತ ‘ಗುರುನಮನ’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದ್ಯಾ ವಾಚಸ್ಪತಿ ವಿ. ಉಮಾಕಾಂತ ಭಟ್ ಕೆರೆಕೈ, ನಿವೃತ್ತ ಕೆಡಿಸಿಸಿ ಎಜಿಎಂ ಸಿ.ಎಸ್. ಹೆಗಡೆ ಆಗಮಿಸಲಿದ್ದಾರೆ.
ಜನ್ಮ ಅಮೃತಮಹೋತ್ಸವದ ಶುಭ ಸಂದರ್ಭದಲ್ಲಿ ಪಂ. ಪ್ರಭಾಕರ ಭಟ್ ಹಾಗೂ ಶ್ರೀಮತಿ ತಾರಾ ಪ್ರಭಾಕರ ಭಟ್ ದಂಪತಿಗಳಿಗೆ ಅವರ ಶಿಷ್ಯ ಬಳಗ ಗುರುವಂದನೆ ಸಲ್ಲಿಸಲು ತೀರ್ಮಾನಿಸಿದ್ದು, ವಿದ್ಯಾರ್ಥಿಗಳಿಂದ ಗಾಯನ-ವಾದನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗಾಯನ ಸೇವೆಯನ್ನು ಶ್ರೀಮತಿ ಭಾವನಾ ಕೆರೆಕೈ, ಗೀತಾ ಹೆಗಡೆ ಹಳಿಯಾಳ,ಶ್ರೀಮತಿ ಸುಧಾ ಹೆಗಡೆ , ಶ್ರೀಮತಿ ಶೈಲಾ ಮತ್ತಿಘಟ್ಟ , ಗಜಾನನ ಹೆಗಡೆ, ಶ್ರೀಮತಿ ವಸುಧಾ ಶರ್ಮಾ, ಶ್ರೀಮತಿ ಸ್ಮಿತಾ ಕುಂಟೇಮನೆ, ಕಿರಣ ಭಟ್ ಕೆರೆಕೈ ನಡೆಸಿಕೊಡಲಿದ್ದಾರೆ. ಕೊಳಲು ವಾದನವನ್ನು ಕುಮಾರಿ ಅಂತರಾ ಭಟ್, ಪ್ರಕಾಶ ಹೆಗಡೆ, ಕಿರಣ ಹೆಗಡೆ, ವಯೋಲಿನ್ ಕಾರ್ಯಕ್ರಮವನ್ನು ಭಾರತಿ ಹೆಗಡೆ ನೀಡಲಿದ್ದಾರೆ. ಪಂ.ಮೋಹನ ಹೆಗಡೆ ಇವರಿಂದ ತಬಲಾ ಸೋಲೊ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಆಕರ್ಷಣೆಯಾಗಿ ಪಂ.ಪ್ರಭಾಕರ್ ಭಟ್ ಹಾಗೂ ಕಿರಣ್ ಭಟ್ ಇವರಿಂದ ಜುಗಲ್ಬಂದಿ ಗಾಯನ ನಡೆಯಲಿದೆ.
ಪ್ರಭಾಕರ್ ಭಟ್ ಅಮೃತ ನಡಿಗೆ:
ಆ ಕಾಲದ ಪ್ರಸಿದ್ಧ ನಾಟಕ ಕಲಾವಿದ, ಸ್ವತಃ ಹಾಡುಗಾರರಾಗಿದ್ದ ದಿ. ನರಸಿಂಹ ಭಟ್ ಹಾಗೂ ಮಹಾಲಕ್ಷ್ಮಿ ಭಟ್ ಕೆರೆಕೈ ದಂಪತಿಗಳ ಪುತ್ರರಾದ ಪಂ.ಪ್ರಭಾಕರ್ ಭಟ್ ನಾಡಿನ ಶ್ರೇಷ್ಠ ಗಾಯಕರಾದ ಸ್ವರ್ಗೀಯ ಪಂಡಿತ್ ಕಮಲಾಕರ ಭಟ್ ಕೆರೇಕೈರ ಕಿರಿಯ ಸಹೋದರರಾಗಿದ್ದಾರೆ. ಸಹೋದರ ಪಂ. ಕಮಲಾಕರ ಭಟ್, ದಿವಂಗತ ಪಂ.ಜಿ.ಎಸ್ ಹೆಗಡೆ ಬೆಳ್ಳೆಕೇರಿ ಇವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದ್ದು, ಪಂ.ಮೋಹನ ಚಿಕ್ಕರಮನೆ ಇವರಲ್ಲಿಯೂ ಮಾರ್ಗದರ್ಶನವನ್ನು ಪಡೆದರು. ಈ ಭಾಗದಲ್ಲಿ ಹಿಂದುಸ್ಥಾನಿ ಸಂಗೀತ ಪ್ರಚಾರ ಪ್ರಸಾರಗೊಳ್ಳಲು ಪಂ.ಜಿ.ಎಸ್. ಹೆಗಡೆ ಬೆಳ್ಳೆಕೇರಿಯವರ ಪಾತ್ರದಷ್ಟೇ ಇವರ ಪ್ರಮುಖ ಶಿಷ್ಯರುಗಳಾದ ಕೆರೆಕೈ ಸಹೋದರರ ಕೊಡುಗೆಯೂ ಅಷ್ಟೇ ಪ್ರಮುಖವಾಗಿದೆ.
ಪಂಡಿತ್ ಪ್ರಭಾಕರ್ ಭಟ್ ಸಿರ್ಸಿ,ಸಿದ್ದಾಪುರ ಅಷ್ಟೇ ಅಲ್ಲದೇ ಬಿದ್ರಕಾನ, ಕಾನಸೂರು, ವಾನಳ್ಳಿ, ಜಡ್ಡಿಗದ್ದೆ ಇಂತಹ ಗ್ರಾಮಾಂತರ ಪ್ರದೇಶಗಳಲ್ಲಿ ಸಂಗೀತ ಶಾಲೆಗಳನ್ನು ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ತಾವು ಕಲಿತ ವಿದ್ಯೆಯನ್ನು ಧಾರೆ ಎರೆದಿದ್ದಾರೆ. ತನ್ಮೂಲಕ ನಮ್ಮ ನಾಡು ಸಾಂಸ್ಕೃತಿಕವಾಗಿ ಇನ್ನಷ್ಟು ಶ್ರೀಮಂತಗೊಳ್ಳಲು ಕಾರಣರಾಗಿದ್ದಾರೆ. 80-90 ರ ದಶಕಗಳಲ್ಲಿ ಭಟ್ ಸಹೋದರರ ಜುಗಲಬಂದಿ ಕಾರ್ಯಕ್ರಮವು ಜನಮನ್ನಣೆ ಗಳಿಸಿತ್ತು. ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಜುಗಲ್ಬಂದಿ ಕಾರ್ಯಕ್ರಮ ಮೀರಜ್ ಹಾಗೂ ಸತಾರಗಳಲ್ಲಿ ಯಶಸ್ವಿ ಪ್ರದರ್ಶನಗೊಂಡಿತ್ತು. ಪಂ. ಪ್ರಭಾಕರ ಭಟ್ ರಾಜ್ಯದ ಅನೇಕ ಭಾಗಗಳಲ್ಲಿ ಯಶಸ್ವಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ದೂರದರ್ಶನದಲ್ಲೂ ಸಹ ಕಾರ್ಯಕ್ರಮ ಪ್ರಸ್ತುತಗೊಂಡಿದೆ. ಇವರ ಶಿಷ್ಯರಲ್ಲಿ ಕೆಲವರು ಸಂಗೀತ ಶಿಕ್ಷಕರಾಗಿ, ಇನ್ನೂ ಕೆಲವರು ಸಂಗೀತ ಕಲಾವಿದರಾಗಿ ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಸಂಗೀತಾಭಿಮಾನಿಗಳು, ಶಿಷ್ಯವರ್ಗದವರೆಲ್ಲರಿಗೂ ಸ್ವಾಗತವನ್ನು ಕೋರಿ, ಗುರುನಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.