ಶಿರಸಿ: ತಾಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ವಿದ್ಯೋದಯ ವಿದ್ಯಾಲಯದಲ್ಲಿ ‘ಹಳೆ ವಿದ್ಯಾರ್ಥಿಗಳ ಸಮಾವೇಶ’, ‘ಗುರು ನಮನ’ ಕಾರ್ಯಕ್ರಮ ಹೃದಯ ಸ್ಪರ್ಶಿಯಾಗಿ ನೆರವೇರಿತು. ನಾಲ್ಕು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಹಳೆ ವಿದ್ಯಾರ್ಥಿಗಳು, ಇಡೀ ಶಾಲೆಯ ಆವಾರ ಓಡಾಟ ಮಾಡಿ ಹಳೆಯ ನೆನಪುಗಳನ್ನೂ ಮಾಡಿಕೊಂಡರು.
ಗ್ರಾಮೀಣ ಭಾಗದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿದ್ಯೋದಯ ಸಂಸ್ಥೆ ಹಲವು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮೆಟ್ಟಿಲಾಗಿದೆ. ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಭವಿಷ್ಯ ಮತ್ತು ಅನ್ನ ನೀಡಿದ ಸಂಸ್ಥೆಗೆ ನಾವೆಲ್ಲರೂ ಋಣಿ ಎಂದು ಯಡಳ್ಳಿ ನಿವೃತ್ತ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಕಲಿತ ಶಾಲೆ ಎಂದು ಅಭಿಮಾನದಿಂದ ವಿದ್ಯಾರ್ಥಿಗಳು ಒಂದಾದರು. ಸೇವೆ ಸಲ್ಲಿಸಿದ ಗುರುವೃಂದ, ಸಿಬ್ಬಂದಿಗಳು ಕೂಡ ವಿದ್ಯಾರ್ಥಿಗಳೊಂದಿಗೆ ಒಂದಾಗಿ ಒಂದು ಅರ್ಥ ಪೂರ್ಣ ಕಾರ್ಯಕ್ರಮಕ್ಕೆ ಯಡಳ್ಳಿ ವಿದ್ಯೋದಯ ಸಂಸ್ಥೆ ಸಾಕ್ಷಿಯಾಯಿತು. ಸೇವೆ ಸಲ್ಲಿಸಿ ಮರೆಯಾದ ಶಿಕ್ಷಕರಿಗೆ ಶೃದ್ದಾಂಜಲಿ, ನಿವೃತ್ತರಿಗೆ ಸನ್ಮಾನ, ಸೇವಾ ನಿರತರಿಗೆ ಗೌರವ ಸಮರ್ಪಣೆ ನೆರೆದಿದ್ದ ಅಪಾರ ಸಭಿಕರನ್ನು ಭಾವುಕರನ್ನಾಗಿಸಿತು. ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಹೆಗಡೆ ಮಶಿಗದ್ದೆ ಹಾಗೂ ಆಡಳಿತ ಮಂಡಳಿ, ಪ್ರಾಂಶುಪಾಲ ಆರ್. ಟಿ. ಭಟ್ಟ, ಪ್ರೌಢಶಾಲೆ ಮುಖ್ಯಾಧ್ಯಾಪಕ ಕೆ.ಜಿ.ಭಟ್ ಹಾಗೂ ಇತರ ಶಿಕ್ಷಕರು, ಸನ್ಮಾನ ಸಮಿತಿಯ ಪ್ರಮುಖರು ಸೇರಿದಂತೆ ಊರ ಮಹನೀಯರು, ಪ್ರಸ್ತುತ ವಿದ್ಯಾರ್ಥಿಗಳ ಪರಿಶ್ರಮದಿಂದ ಮಾದರಿಯಾಯಿತು. ತಳಿರು ತೋರಣದಿಂದ ಸಿಂಗಾರವಾಗಿದ್ದ ಶಾಲಾ ಆವಾರ ಅನೇಕ ಹೊಸ ಕನಸುಗಳಿಗೂ ಸಾಕ್ಷಿಯಾಯಿತು.