ಅಂಕೋಲಾ: ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡದೆ ಉದ್ಧಟತನ ತೋರಿದ ಹಳಿಯಾಳ ಘಟಕದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಂಕೋಲಾದಿಂದ ಪ್ರತಿ ನಿತ್ಯ ಬಿಣಗಾ ಐಟಿಐ ಕಾಲೇಜಿಗೆ ವಿದ್ಯಾರ್ಥಿಗಳು ಅಂಕೋಲಾದಿಂದ ಕಾರವಾರಕ್ಕೆ ಹೊಗುವ ಬಸ್‌ನ್ನೇರಿ ಹೋಗುತ್ತಾರೆ. ಆದರೆ ಬುಧವಾರ ಹಳಿಯಾಳ ಘಟಕದ ಹುಬ್ಬಳ್ಳಿ ಕಾರವಾರ ಬಸ್ ಅಂಕೋಲಾ ಬಸ್ ನಿಲ್ದಾಣದಿಂದ 9.30ಕ್ಕೆ ಹೊರಟಿತ್ತು. ಆ ಬಸ್‌ನಲ್ಲಿ ಬಿಣಗಾ ಐಟಿಐ ಕಾಲೇಜಿನ 9 ಹುಡುಗರು ಹತ್ತಿದ್ದರು. ಬಸ್ ಬಿಟ್ಟ ಮೇಲೆ ನಿರ್ವಾಹಕ ಮತ್ತು ಚಾಲಕ ವಿದ್ಯಾರ್ಥಿಗಳೊಂದಿಗೆ ಉದ್ಧಟತನ ತೋರಿ ಬಿಣಗಾದಲ್ಲಿ ಬಸ್ ನಿಲುಗಡೆ ಮಾಡದೆ ವಿದ್ಯಾರ್ಥಿಗಳಿಗೆ ಕಾರವಾರಕ್ಕೆ ಕರೆದುಕೊಂಡು ಹೋಗಿ ಮತ್ತೆ ಪುನಃ ಅಂಕೋಲಾಕ್ಕೆ ಕರೆ ತಂದಿದ್ದಾನೆ.
ಅಂಕೋಲಾ ಬಂದ ವಿದ್ಯಾರ್ಥಿಗಳು ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ನಿಯಂತ್ರಣಾಧಿಕಾರಿ ಬಳಿ ದೂರಿದ್ದಾರೆ. ಮತ್ತು ಆ ಬಸ್‌ನ ಎದುರು ನಿಂತು ತಮ್ಮಂತಹ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಹೊರಹಾಕಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿಯವರು ತಿಳಿ ಹೇಳಿದರು ಚಾಲಕ ನಿರ್ವಾಹಕರು ತಮ್ಮ ಉದ್ದಟತನವನ್ನು ಬಿಡದೆ ತಮ್ಮದೆ ಸರಿ ಎಂದು ವಾದಿಸುತ್ತಿದ್ದರು. ಬಳಿಕ ಮೇಲಾಧಿಕಾರಿಯವರಿಗೆ ಈ ವಿಷಯವನ್ನು ಗಮನಕ್ಕೆ ತಂದು ಮುಂದಿನ ದಿನದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲಾಯಿತು.
ಬಸ್ ಖಾಲಿ ಓಡಿದರೂ ತೊಂದರೆ ಇಲ್ಲ…!!
ಕೆಲವು ಹುಬ್ಬಳ್ಳಿ ಮತ್ತು ಕಲಘಟಗಿ ಘಟಕದ ಬಸ್‌ಗಳು ಕಾರವಾರ ಬರುತ್ತಿದ್ದು, ಇದರ ಚಾಲಕ ನಿರ್ವಾಹಕರು ವಿದ್ಯಾರ್ಥಿಗಳನ್ನು ಕಂಡರೆ ತಮ್ಮ ಬಸ್‌ನ್ನೇರಲು ಬಿಡುವುದಿಲ್ಲ. ಬಸ್ ಖಾಲಿ ಓಡಾಡಿದರು ತೊಂದರೆ ಇಲ್ಲ ಎಂಬ ಮಾತುಗಳು ಅವರಿಂದ ಕೇಳಿ ಬಂದಿವೆ. ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಗೆ ಮೊದಲೇ ಹಣವನ್ನು ಭರಣ ಮಾಡಿ ಪಾಸ್ ಪಡೆದಿದ್ದಾರೆ. ಆದರೆ ಕೇಲವು ಬಸ್‌ಗಳ ಚಾಲಕ ನಿರ್ವಾಹಕರಿಂದ ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಇಲಾಖೆ ತಕ್ಷಣ ಎಲ್ಲಾ ಚಾಲಕ ನಿರ್ವಾಹಕರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕಿದೆ.