ಕುಮಟಾ: ಎಂ.ಜಿ.ಭಟ್ ಅವರ ನೇತೃತ್ವದ ಹವ್ಯಕ ಸೇವಾ ಪ್ರತಿಷ್ಠಾನದ ವತಿಯಿಂದ ಪಟ್ಟಣದ ಗೋಗ್ರೀನ್ ಮೈದಾನದಲ್ಲಿ ಹಮ್ಮಿಕೊಂಡ ಹವ್ಯಕ ಸಮಾವೇಶದಲ್ಲಿ ಸಾವಿರಾರು ಹವ್ಯಕರು ಪಾಲ್ಗೊಳ್ಳುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಿದರು.
ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡ ಉತ್ತರಕನ್ನಡದ ಹವ್ಯಕ ಸೇವಾ ಪ್ರತಿಷ್ಠಾನವು ಸಮಾಜವನ್ನು ಒಗ್ಗೂಡಿಸುವ ಮತ್ತು ಸಾಮಾಜಿಕ ಸೇವಾ ಮನೋಭಾವವನ್ನು ಜಾಗೃತಗೊಳಿಸುವ ಸದುದ್ದೇಶದಿಂದ ಹಮ್ಮಿಕೊಂಡ ಹವ್ಯಕ ಸಮಾವೇಶಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಗಮಿಸುತ್ತಿದ್ದಂತೆ ಪೂರ್ಣಕುಂಭಗಳ ಸ್ವಾಗತ ಕೋರಲಾಯಿತು.
ಪಂಚವಾದ್ಯಗಳೊಂದಿಗೆ ಆಗಮಿಸಿದ ಶ್ರೀಗಳು ಹವ್ಯಕ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿದರು. ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ.ಭಟ್ ದಂಪತಿಯು ಶ್ರೀಗಳ ಪಾದ ಪೂಜೆ ನೆರವೇರಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಜಿ.ಭಟ್, 8 ವರ್ಷಗಳ ಹಿಂದೆ ಸೇವಾ ಮನೋಭಾವದಿಂದ ಹುಟ್ಟಿಕೊಂಡ ಹವ್ಯಕ ಸೇವಾ ಪ್ರತಿಷ್ಠಾನವು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ನಮ್ಮ ಸಮಾಜದಲ್ಲಿ ಅತೀ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿದೆ. ಆರೋಗ್ಯ, ಶೈಕ್ಷಣಿಕೆ ನೆರವು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅನಾದಿ ಕಾಲದಿಂದಲೂ ಸನಾತನ ಧರ್ಮ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನೇ ನೀಡುತ್ತ ಬಂದಿದೆ. ಅದಕ್ಕೆ ನಮ್ಮ ಹಿರಿಯರ ಶ್ರಮವೂ ಸಾಕಷ್ಟಿದೆ. ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ವೇದ, ಉಪನಿಷತ್‌ಗಳಲ್ಲಿದೆ. ಈ ಜ್ಞಾನ ಭಂಡಾರವನ್ನು ನಾವೆಲ್ಲ ಅರಿಯಲೇ ಬೇಕು. ಅದರ ಆಳವನ್ನು ಅರಿತರೆ ಮಾತ್ರ ಜ್ಞಾನದ ಸಂಪತ್ತನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯ. ಆ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗೋಣ. ನಮ್ಮ ಸಮಾಜ ಸೇರಿದಂತೆ ಎಲ್ಲ ಉಪಜಾತಿಗಳು ಒಗ್ಗೂಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಜಾತಿಗಳ ನಡುವೆ ಸಂಘರ್ಷ ಬೇಡ. ನಾವೆಲ್ಲ ಒಂದೇ ಭಾವ ಮೂಡಬೇಕು. ಶಿಕ್ಷಣ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೇ ಸಂಸ್ಕಾರವನ್ನು ಕಲಿಸುವ ಜೊತೆಗೆ ದೇಶ ಮೊದಲು ಎಂಬ ಭಾವ ಮೂಡಿಸಲು ಇಂಥ ಸಮಾವೇಶಗಳು ಕಾರಣವಾಗಬೇಕು ಎಂದರು.
ಬಳಿಕ ಹವ್ಯಕ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಹವ್ಯಕ ಪದದ ವ್ಯಾಖ್ಯಾನವನ್ನು ಬಹಳ ಅರ್ಥಪೂರ್ಣವಾಗಿ ಮಾಡಿದರು. ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಹವ್ಯಕರು ಎಲ್ಲಿಯೇ ಇರಲಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವಾಗಬೇಕು. ಸಂಘಟನೆಯ ಜೊತೆಗೆ ಸಂಸ್ಕಾರ ಉಳಿಸುವ ಕಾರ್ಯ ಹವ್ಯಕರಿಂದಾಗಬೇಕೆಂದು ನುಡಿದರು.
ಸಮಾವೇಶದ ವೇದಿಕೆಯಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ, ಹವ್ಯಕ ಮಹಾಸಭಾದ ರಾಜ್ಯಾಧ್ಯಕ್ಷ ಗಿರಿಧರ ಕಜೆ, ಪ್ರಮುಖರಾದ ಮಹಾಬಲೇಶ್ವರ ಹೆಗಡೆ, ಆರ್ ಎಂ ಹೆಗಡೆ ಬಾಳೇಸರ್, ನಾಗರಾಜ ಭಟ್ ಬೆಂಗ್ರೆ, ಮಹೇಶ ಕಜೆ, ಆರ್.ಎಸ್.ಹೆಗಡೆ ಹರಗಿ, ಡಾ.ಜಿ.ಜಿ.ಹೆಗಡೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಇತರರು ಇದ್ದರು.