ದಾಂಡೇಲಿ: ಅಪ್ರಾಪ್ತ ಬಾಲಕನೋರ್ವ ದ್ವಿಚಕ್ರ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಜೆ.ಎಂ.ಎಫ್.ಸಿ ನ್ಯಾಯಾಲಯ ವಾಹನ ಮಾಲಕನಿಗೆ 30 ಸಾವಿರ ರೂ. ದಂಡ ವಿಧಿಸಿದೆ.
ಕಳೆದ ಮೂರು ದಿನಗಳ ಹಿಂದೆ ನಗರದ ಬರ್ಚಿ ರಸ್ತೆಯ ಹತ್ತಿರ ಬಾಲಕನೋರ್ವ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು ಗಮನಿಸಿ ನಗರ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ್ ಅವರು ಪರಿಶೀಲಿಸಿದಾಗ, ಚಾಲಕ ಅಪ್ರಾಪ್ತನಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿಲ್ಲವಾಗಿತ್ತು. ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ಕಾರಣ ವಾಹನದ ಮಾಲೀಕ ಹಳೆದಾಂಡೇಲಿಯ ನಿವಾಸಿ ನವೀನ್ ಮುನಿಗಟ್ಟಿ ವಿರುದ್ಧ ಪಿಎಸೈ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ಕುರಿತಂತೆ ತ್ವರಿತ ವಿಚಾರಣೆ ನಡೆಸಿದ ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ ಡಿ.ಬಸಾಪುರ, ನವೀನ್ ಮುನಿಗಟ್ಟಿಗೆ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ವಕೀಲರಾದ ಹುಸೇನಸಾಬ್ ಎಂ.ನದಾಫ್ ಅವರು ವಾದ ಮಂಡಿಸಿದ್ದರು.