ಕಾರವಾರ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಗರದ ಕೋಡಿಭಾಗದ ವಿಜಯಾನಂದನಿಗೆ ನಗರಸಭಾ ಸದಸ್ಯ ಹಾಗೂ ಆತನ ಸಹೋದರ ಅವಮಾನ ಮಾಡಿದ್ದಾರೆ ಎಂದು ಹುತಾತ್ಮ ಯೋಧನ ಸಹೋದರ ವಿಶಾಲ ನಾಯ್ಕ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಯಯಾನಂದ ಕುಟುಂಬಸ್ಥರು, ಗಡಿ ಭದ್ರತಾ ಪಡೆಯಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ವಿಜಯಾನಂದ 2018ರಲ್ಲಿ ಛತ್ತೀಸಘಡದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಆತನ ನೆನಪಿಗೆ ಸಾರ್ವಜನಿಕರು, ತಮ್ಮ ಊರಿನವರು ಸೇರಿ ಕೋಮಾರಪಂಥವಾಡದ ಮನೆಯ ಬಳಿ ಇರುವ ಸ್ವಂತ ಜಾಗದಲ್ಲಿ ಧ್ವಜ ಕಟ್ಟೆ,ಆತನ ಭಾವಚಿತ್ರ ಇರುವ ಸ್ಮಾರಕ ಸ್ವಯಂ ಪ್ರೇರಣೆಯಿಂದ ನಿರ್ಮಿಸಿದ್ದಾರೆ. ಆದರೆ ಈಗ ನಗರಸಭಾ ಸದಸ್ಯ ಮೋಹನ, ಆತನ ಸಹೋದರ ಶ್ಯಾಮ್ ಆ ಸ್ಮಾರಕ ಕಾನೂನು ಬಾಹಿರವಾಗಿದೆ. ಅದನ್ನು ತೆರವು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಮಾರಕ ನಿರ್ಮಾಣವಾದಾಗಿನಿಂದಲೂ ಆಗಸ್ಟ್ 15, ಜನವರಿ 26 ರಂದು ಧ್ವಜಾರೋಹಣ ಮಾಡಿಕೊಂಡು ಬರಲಾಗುತ್ತಿದೆ. ವಿಜಯಾನಂದ ಹುಟ್ಟಿದ ದಿನ, ಮೃತಪಟ್ಟ ದಿನ ಕೂಡಾ ಅಲ್ಲಿಯೇ ಆಚರಣೆ ಮಾಡಲಾಗುತ್ತದೆ. ಸ್ಮಾರಕ ಇರುವ ಪಕ್ಕದಲ್ಲಿ ಇರುವ ಸ್ಥಳವನ್ನು ಮೋಹನ ಹಾಗೂ ಆತನ ಸಹೋದರ ಶ್ಯಾಮ ಖರೀದಿಸಿದ್ದು, ಓಡಾಡಲು ಅಲ್ಲಿಯೇ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಈ ಸ್ಮಾರಕ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ. ಅದನ್ನು ಒಡೆಯುತ್ತೇವೆ. ಜಿಲ್ಲಾಡಳಿತ ಹಾಗೂ ನಗರಸಭೆ ಸ್ಮಾರಕವನ್ನು ತೆರವು ಮಾಡಲು ಒಪ್ಪಿಗೆ ನೀಡಿದೆ ಎಂದು ಹೆದರಿಸುತ್ತಿದ್ದು, ಅವರು ಖರೀದಿಸಿದ ಜಾಗಕ್ಕೆ ಹೋಗಲು ಬೇರೆ ಮಾರ್ಗವಿದ್ದರೂ ಉದ್ದೇಶ ಪೂರ್ವಕವಾಗಿ ಸ್ಮಾರಕದ ಬಳಿಯೇ ರಸ್ತೆ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬ ಇದನ್ನು ಪ್ರಶ್ನಿಸಲು ಹೋದರೆ ಪೊಲೀಸರಿಗೆ ದೂರು ನೀಡುತ್ತಾರೆ. ಅವಾಚ್ಯ ಶಬ್ಧದಿಂದ ನಿಂದಿಸುತ್ತಾರೆ ಎಂದು ದಿ.ವಿಜಯಾನಂದರ ಸಹೋದರ ವಿಶಾಲ್ ಆರೋಪಿಸಿದ್ದಾರೆ.
ನಗರಸಭೆ ಸದಸ್ಯ ಹಾಗೂ ಅವರ ಸಹೋದರನಿಂದ ತಮಗೆ ತೊಂದರೆ ಆಗುತ್ತಿದೆ. ದೇಶಕ್ಕಾಗಿ ಪ್ರಾಣಕೊಟ್ಟವನ ಸ್ಮಾರಕ ತೆರವು ಮಾಡಿ ಅವಮಾನ ಮಾಡಲು ಹೊರಟಿದ್ದಾರೆ. ಜಿಲ್ಲಾಡಳಿತಕ್ಕೆ, ತಹಶೀಲ್ದಾರರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕಳೆದ ಎರಡು ವರ್ಷದಿಂದ ಇದೇ ರೀತಿ ನಡೆಯುತ್ತಿದ್ದು, ಸ್ಮಾರಕ ತಮ್ಮ ಕುಟುಂಬ ಸ್ವಂತ ಜಾಗದಲ್ಲಿದೆ. ಇದರಿಂದ ಯಾರಿಗೂ ಸಾರ್ವಜನಿಕರಿಗೆ ತೊಂದರೆಯೂ ಆಗಿಲ್ಲ. ಆದರೂ ವಿನಾ ಕಾರಣ ತಮ್ಮ ಮೇಲೆ ಹಾಗೂ ಸ್ಮಾರಕದ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ದಿ.ವಿಜಯಾನಂದ ಅವರ ತಂದೆ ಸುರೇಶ ನಾಯ್ಕ, ತಾಯಿ ವಿದ್ಯಾ, ಎಸ್.ಎಂ.ನಾಯ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.