• Slide
    Slide
    Slide
    previous arrow
    next arrow
  • ಬಸ್ ಹತ್ತಲು ನೆರೂರು ಗ್ರಾಮದ ವಿದ್ಯಾರ್ಥಿಗಳ ಹರಸಾಹಸ: ಸಮಸ್ಯೆ ಪರಿಹಾರಕ್ಕೆ ಆಗ್ರಹ

    300x250 AD

    ಶಿರಸಿ: ಶೈಕ್ಷಣಿಕ ಜಿಲ್ಲೆ ಎನಿಸಿಕೊಂಡಿರುವ ಶಿರಸಿಯಲ್ಲಿ ವಿದ್ಯಾರ್ಥಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಬಸ್‌ನಲ್ಲಿ ಹರಸಾಹಸ ಮಾಡಬೇಕಾದ ಅನಿವಾರ್ಯತೆ ಇದೆ. ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು ಅಂದರೆ ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡೇ ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಚಿತ.

    ಹಿರೇಕೇರೂರು-ಶಿರಸಿ ನಡುವೆ ಸಂಪರ್ಕ ಕಲ್ಪಿಸುವ ಬಸ್‌ನ ಈ ಮಾರ್ಗದಲ್ಲಿ ಬರುವ ನೆರೂರು ಪುರದೂರು, ಜಡ್ಡಿಹಳ್ಳಿ, ತಿಗಣಿ ಇನ್ನಿತರೆ ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸರಾಗ ಸಾರಿಗೆ ವ್ಯವಸ್ಥೆ ಇಲ್ಲ. ಈ ಗ್ರಾಮಗಳಿಗೆ ಬರುವ ಕೆಲವೇ ಕೆಲವು ಬಸ್‌ಗಳಿಗೆ ಮುಗಿಬಿದ್ದಾದರೂ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.

    ಸೊರಬದಿಂದ ಶಿರಸಿಗೆ ಹೋಗುವ ಮೊದಲ ಬಸ್ 8.30ಕ್ಕೆ ಈ ಭಾಗಕ್ಕೆ ಬರುತ್ತದೆ. ಶಾಲೆಯ ಸಮಯಕ್ಕೆ ಬರುವ 8.30ರ ಬಸ್ ನಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇರುತ್ತಾರೆ. ಬಸ್ ನಲ್ಲಿ ಸ್ಥಳಾವಾಕಾಶ ಸಿಗದ ಕಾರಣ ಜೋತಾಡಬೇಕಾಗುತ್ತದೆ ಎಂಬುದು ಸ್ಥಳೀಯರ ಅಳಲು. ಸರ್ಕಾರಿ ಬಸ್‌ನ ನಂತರ ಬರುವ ಖಾಸಗಿ ಬಸ್ 9.30ಕ್ಕೆ ಬರುತ್ತದೆ. ಅದರಲ್ಲಿ ಪ್ರಯಾಣಿಸೋಣ ಎಂದರೆ ಶಾಲೆಗೆ ತಡವಾಗುತ್ತಿದೆ. ಹೀಗಾಗಿ ಸೊರಬದಿಂದ ಬೆಳಗ್ಗೆ 7.45 ಇಲ್ಲವೇ 8ಕ್ಕೆ ಹೆಚ್ಚುವರಿ ಬಸ್ ಬಿಡುವ ಅಗತ್ಯವಿದೆ. ಸಂಜೆ ಕೂಡ ಶಿರಸಿಯಿಂದ ಸೊರಬಕ್ಕೆ 4.30 ಇಲ್ಲವೆ 5 ಕ್ಕೆ ಬಸ್ ಬಿಡುವ ಅಗತ್ಯವಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    300x250 AD

    ಹೀಗೆ ಬಸ್ ಹತ್ತಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿರುವ ದೃಶ್ಯವೊಂದನ್ನು ಸ್ಥಳೀಯರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಡಿಯೊ ನೋಡಿ ವಿದ್ಯಾರ್ಥಿಗಳ ಸಂಕಟ ಅರಿಯಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಈ ಬಗ್ಗೆ ಶಿರಸಿ ಆರ್‌ಟಿಒ ಅಧಿಕಾರಿಗಳು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಹರಿಸಬೇಕಿದೆ. ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸಂಭವನೀಯ ಅಪಾಯದಿಂದ ಪಾರು ಮಾಡಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top