ಕಾರವಾರ: ಬಡ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ನರ್ಸ್ ಮತ್ತು ವ್ಶೆದ್ಯಾಧಿಕಾರಿಗಳು ಅವರಿಗೆ ಉತ್ತಮ ರೀತಿಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನವನ್ನು ಜ್ಯೋತಿ ಬೆಳಿಗಿಸುವ ಮೂಲಕ ಉದ್ಘಾಟಸಿ ಮಾತನಾಡಿದರು.
ಎಚ್.ಐ.ವಿ/ಏಡ್ಸ್ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆಯ ಜೊತೆಗೆ ಕಾನೂನು ಸೇವಾ ಪ್ರಾಧಿಕಾರವು ಕೈ ಜೋಡಿಸುತ್ತಾ ಬಂದಿದೆ. ಎಚ್.ಐ.ವಿ ಸೋಂಕಿತರನ್ನು ಕಳಂಕವಾಗಿ ನೋಡದೆ ಅಂತಹ ರೋಗಿಗಳನ್ನು ಸಾಮಾನ್ಯ ರೋಗಿಗಳಂತೆ ಉಪಚಾರಿಸುವುದು ತುಂಬಾನೇ ಮುಖ್ಯವಾಗಿದೆ ಎಂದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತಳಕರ ಮಾತನಾಡಿ, ಜಿಲ್ಲೆಯಲ್ಲಿನ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದೇವೆ. ಇದರ ಜೊತೆಗೆ ಎಚ್.ಐ.ವಿ ಸೋಂಕಿತರಿಗೂ ಗುಣಮಟ್ಟದ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ಇದನ್ನು ಗುರುತಿಸಿದ ರಾಜ್ಯ ಸರಕಾರವು ಅತ್ಯುತ್ತಮ ಸೇವೆ ಸಲ್ಲಿಸಿದ ಆಸ್ಪತ್ರೆಯೆಂದು ಗುರುತಿಸಿ ಇಂದು ರಾಜ್ಯ ಮಟ್ಟದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಎ.ಆರ್.ಟಿ ಕೇಂದ್ರವನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಜಿಲ್ಲಾ ಆರ್‌ಸಿಎಚ್‌ಒ ಡಾ.ರಮೇಶ ರಾವ್ ಮಾತನಾಡಿ, ಎಚ್.ಐ.ವಿ/ಏಡ್ಸ್ ಕಾರ್ಯಕ್ರಮ ಉದ್ದೇಶವನ್ನು ವಿವರವಾಗಿ ತಿಳಿಸಿದರು. ಬಳಿಕ ಆಪ್ತ ಪಿಪಿಟಿಸಿಟಿ ಜಿಲ್ಲಾ ಆಸ್ಪತ್ರೆ, ಸಮಾಲೋಚಕರಾದ ಸೀಮಾ ಕದಂ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ ನಾಯಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ್ ಕಕ್ಕಣ್ಣನವರ್, ಪೊಲೀಸ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಡ್ಯಾಪ್ಕೋ ಕಛೇರಿಯ ಸಿಬ್ಬಂದಿ, ವಿವಿಧ ಸಂಸ್ಥೆಯ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.