ಕಾರವಾರ: ತಾಲೂಕಿನ ಚಂಡಿಯಾ ಗ್ರಾಮ ಪಂಚಾಯತಿ ಆವರಣದಲ್ಲಿ ಜರುಗಿದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡಿಗೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ಸಂಜೀವಿನಿ ಮಾಸಿಕ ಸಂತೆ, ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿವಾರಣಾ ದಿನಾಚರಣೆಯನ್ನು ಚಂಡಿಯಾ ಗ್ರಾಮ ಪಂಚಾಯತಿ ಅಧ್ಯಕ್ಷ ಜೀತೇಶ ಅರ್ಗೇಕರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಪಾಶ್ಚಿಮಾತ್ಯ ಸಂಸ್ಕೃತಿ, ಸಂಸ್ಕಾರ, ಆಹಾರ ಪದ್ಧತಿಯ ಅನುಕರಣೆಯಿಂದ ಹೊರಬಂದು ನರೇಗಾ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸಹಾಯಧನ ಪಡೆದು ಸಣ್ಣಪುಟ್ಟ ಉತ್ಪನ್ನ ತಯಾರಿಸಿಕೊಂಡು ಜೀವನೋಪಾಯ ಕಂಡುಕೊಂಡಿರುವ ಸ್ವ-ಸಹಾಯ ಸಂಘಗಳ ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಪ್ರತಿಯೊಬ್ಬರೂ ಸಹಾಯ, ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ ಎನ್‌ಆರ್‌ಎಲ್‌ಎಂ ಒಗ್ಗೂಡಿಸುವಿಕೆಯಡಿ ಹಳ್ಳಿಗಳ ಮಹಿಳೆಯರು ತಯಾರಿಸುವಂತಹ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಚಕ್ಕಲ, ಶೆಂಗಾ ಚಿಕ್ಕಿ ಸೇರಿದಂತೆ ಅನೇಕ ಉತ್ಪನ್ನಗಳ ಮಾರಾಟಕ್ಕೆ ಎನ್‌ಆರ್‌ಎಲ್‌ಎಂ ವರ್ಕ್ ಶಡ್, ನರ್ಸರಿ, ಪೌಷ್ಟಿಕ ಕೈತೋಟದಂತ ಕಾಮಗಾರಿಗೆ ಅವಕಾಶ ಕಲ್ಪಿಸಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರೂ ಸಹ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಹೊರಬಂದು ಗ್ರಾಮೀಣ ಮಹಿಳೆಯರಿಂದ ತಯಾರಾಗುವಂತ ಪೌಷ್ಟಿಕಯುಕ್ತ ಉತ್ಪನ್ನಗಳನ್ನು ಖರಿದಿಸಬೇಕು. ಜೊತೆಗೆ ಪ್ರತಿಯೊಬ್ಬ ಮಹಿಳೆ ಯಾವುದೇ ಹಿಂಜರಿಕೆ ಇಲ್ಲದೇ ಸರಕಾರದ ಯೋಜನೆಗಳ ಪ್ರಯೋಜನ ಪಡೆದು ತಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಉದ್ಯಮಗಳಲ್ಲಿ ತೊಡಗಬೇಕು. ಮಹಿಳೆಯರ ಸಣ್ಣಪುಟ್ಟ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯಾಗಿರುವ ಸಂಜೀವಿನಿ ಮಾಸಿಕ ಸಂತೆ ನಿರಂತರವಾಗಿ ನಡೆಯಬೇಕು ಎಂದರು.
ಸಿಡಿಪಿಒ ಕಚೇರಿಯ ನಿವೃತ್ತ ಅಧೀಕ್ಷಕಿ ಹೇಮಲತಾ ತಾಂಡೇಲ್ ಮಾತನಾಡಿ, ಸರಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವಂತಹ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸೇರಿದಂತೆ ಅನೇಕ ದೌರ್ಜನ್ಯ ಜರುಗುತ್ತಿದ್ದು, ಎಲ್ಲ ಮಹಿಳೆಯರು ಕೌಟುಂಬಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕಿದೆ. ಈ ತರಹದ ಹಿಂಸೆ ಅಥವಾ ದೌರ್ಜನ್ಯಕ್ಕೆ ಒಳಗಾದವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ಸಖಿ, ಸಾಂತ್ವನ ಕೇಂದ್ರಕ್ಕೆ ಸಂಪರ್ಕಿಸುವ ಮೂಲಕ ದೂರು ದಾಖಲಿಸಬೇಕು. ಹಾಗೇ ಮಕ್ಕಳ ಮೇಲಿನ ಹಲ್ಲೆ ಕುರಿತು ಸಾರ್ವಜನಿಕರು, ಪೋಷಕರು ಜಾಗೃತರಾಗಿರಬೇಕು. ಲಿಂಗ, ಶಿಕ್ಷಣ, ಸಾಮಾಜಿಕ ತಾರತಮ್ಯ, ಬಾಲ್ಯ ವಿವಾಹದ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪಿಡಿಒ ಎನ್.ಕೆ.ತೆಂಡೂಲ್ಕರ್, ತಾಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾ ಯೋಜನೆಯ ಬಗ್ಗೆ ಹಾಗೂ ಮಹಿಳಾ ಬಾಗವಹಿಸುವಿಕೆ ಹಾಗೂ ಜಲಶಕ್ತಿ ಅಭಿಯಾನ ಹಾಗೂ ಪೌಷ್ಟಿಕ್ ಕೈ ತೋಟದ ಕುರಿತು ಮಾಹಿತಿ ನೀಡಿದರು. ಇದೇವೆಳೆ ಗ್ರಾಮ ಪಂಚಾಯತಿ ಮಟ್ಟದ ಸ್ಪೂರ್ತಿ ಸಂಜೀವಿನಿ ಒಕ್ಕೂಟದಿಂದ ಆಯೋಜಿಸಿದ್ದ ಮಾಸಿಕ ಸಂತೆಯಲ್ಲಿ ಸ್ವ- ಸಹಾಯ ಸಂಘದ ಮಹಿಳೆಯರು ತಯಾರಿಸಿದಂತ ಉತ್ಪನ್ನಗಳನ್ನು ಮಹಿಳೆಯರು ಮಾರಾಟ ಮಾಡಿದರು.
ಈ ಸಂದರ್ಭದಲ್ಲಿ ತೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪೇರು ಗೌಡ, ಸರ್ವ ಸದಸ್ಯರು, ಗ್ರಾಮೀಣ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೇದೆ ಸರಿತಾ ನಾಯಕ, ಎನ್‌ಆರ್‌ಎಲ್‌ಎಂನ ಟಿಪಿಎಂ ಸುಬ್ರಹ್ಮಣ್ಯ ಶಿರೂರ, ಸಿಎಸ್ ಯೋಗೇಶ ನಾಯ್ಕ್, ಗ್ರಾಮ ಪಂಚಾಯತಿ ಮಟ್ಟದ ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೀಪಾ ನಾಯ್ಕ್, ಬಿಆರ್‌ಪಿ ಸುನಿತಾ ಗೊಡಾರ್ಕರ್, ಎಂಬಿಕೆಗಳಾದ ನಿಕಿತಾ ಮಂಜರೇಕರ್, ದೇವಿಕಾ ನಾಯ್ಕ್, ಗ್ರಾ.ಪಂ ಸಿಬ್ಬಂದಿ ಆಶಾ ನಾಯ್ಕ್, ಪೂರ್ಣಿಮಾ ಮಂಜರೇಕರ, ತುಕಾರಾಮ ಗುನಗಿ, ಪ್ರಕಾಶ ನಾಗೇಕರ ಸೇರಿದಂತೆ ಸ್ವ- ಸಹಾಯ ಸಂಘದ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.