ದಾಂಡೇಲಿ: ಹಳಿಯಾಳ- ಜೊಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13,537 ಮತದಾರರ ಹೆಸರನ್ನು ಅಳಿಸಿ ಹಾಕಲಾಗಿರುವುದು ತೀವ್ರ ಖಂಡನೀಯ. ಮತದಾರರ ಹೆಸರನ್ನು ಅಳಿಸಿ ಹಾಕುವುದರ ಮೂಲಕವಾಗಿ ರಾಜ್ಯದ ಬಿಜೆಪಿ ಸರಕಾರ ವಾಮಾ ಮಾರ್ಗದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಹೊರಟಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಆರೋಪಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ದಾದಪೀರ್ ನದೀಮುಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಾಜ್ ಬಾಬು ಸೈಯದ್, ರಾಜ್ಯದ ಬಿಜೆಪಿ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಮತದಾರರ ಹೆಸರನ್ನು ಕೈ ಬಿಡುವುದು ಸಹಜ ಪ್ರಕ್ರಿಯೆಯಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕ್ಷೇತ್ರದ ಪ್ರತಿ ಮನೆ ಮನೆಗಳಿಗೆ ತೆರಳಿ ಮತದಾರರ ಯಾದಿಯ ಬಗ್ಗೆ ಪರಿಶೀಲನೆ ನಡೆಸಲು ಈಗಾಗಲೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ವಿನಾಯಕ್ ಬಾರೀಕರ್, ನಬೀ ಫೀರಸಾಬ್ ಬಿಜಾಪುರಿ, ರಿಯಾಜ್ ಚೌಕಡಾತ್, ಖುರ್ಷಿದ್ ಕಿತ್ತೂರು, ಪ್ರಭಾಕರ ಗೋನಾ, ಅನ್ವರ್ ಪಠಾಣ್, ಜಹಾಂಗೀರ್ ಖಾನ್, ರೇಷ್ಮಾ ಮಾಲ್ದಾರ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಪಕ್ಷದ ಅಲ್ಪಸಂಖ್ಯಾತ ಘಟಕದ ಸದಸ್ಯರು ಇದ್ದರು.