ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹ ಸಾಗರ ವಸತಿ ಶಾಲೆಯಲ್ಲಿ ಭಾರತದ ಸಂವಿಧಾನ ದಿನಾಚರಣೆ ನೆರವೇರಿತು. ನ.26ರ ಮುಂಜಾನೆ ಸ್ನೇಹಸಾಗರ ಶಾಲೆಯ ಆವರಣದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನದ ಅಡಿಪಾಯವನ್ನು ನಿರ್ಮಿಸಿದ ಮಹಾನ್ ನಾಯಕರುಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ, ಬಿ. ಆರ್ ಅಂಬೇಡ್ಕರ್, ಚಾಚಾ ನೆಹರು ಅವರುಗಳ ಭಾವಚಿತ್ರಗಳ ಜೊತೆಗೆ ಭಾರತ ಮಾತೆಯ ಅಡಿದಾವರೆಯಲ್ಲಿ ದೀಪ ಬೆಳಗಿ, ಪುಷ್ಪಾರ್ಚನೆಯನ್ನು ಮಾಡುವ ಮುಖೇನ ವಿಶಿಷ್ಟದಿನವನ್ನಾಗಿ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಯಾಗಿರುವ ಎನ್.ಎ. ಭಟ್ ಅವರು ಸಂವಿಧಾನ ಮಹತ್ವದ ಕುರಿತು ಪ್ರಸ್ತಾವಿಕ ಮಾತನ್ನು ಆಡಿದರು. ಸಹ ಶಿಕ್ಷಕರಾದ ಅಕ್ಷಯ್ ಅವರು ಸಂವಿಧಾನ ರಚನೆಯ ಕಾಲಘಟ್ಟವನ್ನು ವಿಸ್ತಾರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು. ಈ ಶುಭ ಸಂದರ್ಭದಲ್ಲಿ ಮಕ್ಕಳು ಸಂವಿಧಾನ ನಿರ್ಮಾಣದ ಕೊನೆಯ ಹಂತದ ಘಳಿಗೆಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ, ಬಿ. ಆರ್ ಅಂಬೇಡ್ಕರ್, ಚಾಚಾ ನೆಹರು ಮತ್ತು ಭಾರತ ಮಾತೆಯ ಛದ್ಮವೇಷದೊಂದಿಗೆ ಸಂವಿಧಾನ ರಚನಾ ಪುಸ್ತಕವನ್ನು ಭಾರತಾಂಬೆಯ ಅಡಿದಾವರೆಯಲ್ಲಿ ಅರ್ಪಿಸುವಂತಹ ಕಿರು ಘಟನೆಯನ್ನು ಮರುಸೃಷ್ಟಿಸಿ ಮಾಹಾನ್ ನಾಯಕರುಗಳಿಗೆ ಗೌರವನ್ನು ಅರ್ಪಿಸಿದರು. ಅಕ್ಷಯ್ ಅವರು ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಕ್ಕಳು ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಮಹನೀಯರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.