ಕಾರವಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರಿಗೆ ಸಮಾನ ಕೂಲಿ ಹಾಗೂ ಕೆಲಸದಿಂದ ಹಿಡಿದು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಪಡೆದುಕೊಂಡು ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿವೆ ಎಂದು ಕದ್ರಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಬನಾ ಮುಲ್ಲಾ ಅಭಿಪ್ರಾಯ ತಿಳಿಸಿದರು.
ತಾಲೂಕಿನ ಕದ್ರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋರೆ ಮಜಿರೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳನ್ನು ಜನಸಾಮಾನ್ಯರು, ಸ್ವ-ಸಹಾಯ ಸಂಘದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗದವರಿಗೆ ತಲುಪಿಸುವ ಹಾಗೂ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಶುಕ್ರವಾರ ಜರುಗಿದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡಿಗೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ದಿಂದ ಅಜಾದಿ ಕಾ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಜಲಶಕ್ತಿ, ಜಲಸಂಜೀವಿನಿ ಕಾರ್ಯಕ್ರಮದಡಿ ಅನೇಕ ಜಲ ಹಾಗೂ ಪರಿಸರ ಸಂರಕ್ಷಣಾ ಕಾಮಗಾರಿಗಳನ್ನು ನರೇಗಾದಡಿ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಮುಖ್ಯವಾಹಿಗೆ ತಂದು ನರೇಗಾದಡಿ ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಶೇ. 60ಕ್ಕೆ ಹೆಚ್ಚಿಸುವುದಕ್ಕೂ ಕ್ರಮವಹಿಸಲಾಗುತ್ತಿದೆ. ಹಾಗೇ ಮಹಿಳೆಯರ ಸಬಲೀಕರಣಕ್ಕಾಗಿ ಎನ್.ಆರ್.ಎಲ್.ಎಂ ಶೆಡ್, ಪೌಷ್ಟಿಕ ಕೈತೋಟ, ನರ್ಸರಿಯಂತಹ ಕಾಮಗಾರಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಗ್ರಾಮ ಪಂಚಾಯತಿಗೆ ಬೇಡಿಕೆ ಅರ್ಜಿ ಸಲ್ಲಿಸುವ ಮೂಲಕ ನರೇಗಾ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ ಅಬಾ ಕಾರ್ಡ್ ಮತ್ತು ಇ-ಶ್ರಮ್ ಕಾರ್ಡ್ ನ್ನು ಪ್ರತಿಯೊಬ್ಬರೂ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕ ಐ.ಇ.ಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕೂಲಿಕಾರರು, ಲಿಂಗತ್ವ ಅಲ್ಪಸಂಖ್ಯಾತರು ಉದ್ಯೋಗ ಖಾತ್ರಿಯಲ್ಲಿ ಪಾಲ್ಗೊಂಡರೆ ಶೇ.10ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಸಿಗಲಿದೆ.ಅಲ್ಲದೇ 2023-24 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳನ್ನು ಸೇರಿಸಬೇಕಿದ್ದು, ಪ್ರತಿಯೊಬ್ಬರೂ ನರೇಗಾದಲ್ಲಿ ಲಭ್ಯವಿರುವ ಅಗತ್ಯ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿದರೆ ತಕ್ಷಣ ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕದ್ರಾ ಗ್ರಾಮ ಪಂಚಾಯತಿ ಸದಸ್ಯೆ ಅಶ್ವಿನಿ ಪೆಡ್ಣೆಕರ, ಕಮುನಿಟಿ ಹೆಲ್ತ್ ಆಫಿಸರ್ ಮಂಜುಳಾ ಇಟಗಿ, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಜಲವಾದಿ, ವಾಟರ್ ಮನ್ ಮಹೇಶ ಭಜಂತ್ರಿ, ವಿವಿಧ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಅಂಗನವಾಡಿ, ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.