ದಾಂಡೇಲಿ: ತಾಲೂಕಿನ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಡರ ಶಿರಗೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಶನಿವಾರ ಜರುಗಿತು.
ತಹಶೀಲ್ದಾರ್ ಶೈಲೇಶ ಪರಮಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯವಾಗಿರುವ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಈ ಕರ‍್ಯಕ್ರಮ ಮಹತ್ವಪೂರ್ಣವಾಗಿದೆ. ವಿವಿಧ ದಾಖಲಾತಿ ಸೇರಿದಂತೆ ಸರಕಾರದ ವಿವಿಧ ಕೆಲಸ ಕರ‍್ಯಗಳಿಗೆ ಕಚೇರಿಗಳಿಗೆ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಹಳ್ಳಿಯ ಜನರಿಗೆ ಅನುಕೂಲಕರವಾಗಿದೆ ಎಂದರು.
ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಸ್ಥಳೀಯ ಸಮಸ್ಯೆಗಳ ಪರಿಹಾರದ ಜೊತೆಗೆ ವಿವಿಧ ಇಲಾಖೆಗಳ ಕಾರ್ಯಯೋಜನೆಗಳು ಮತ್ತು ವಿವಿಧ ಸರಕಾರಿ ಸೌಲಭ್ಯಗಳ ಬಗ್ಗೆ ಸ್ಥಳೀಯ ಜನರಿಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ ಎಂದರು.
ಆಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಜಾಧವ್ ಕಾರ್ಯಕ್ರಮ ಉದ್ಘಾಟಿಸಿ, ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ತಾಲ್ಲೂಕಾಡಳಿತ ವಿಶೇಷ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿ, ಸ್ಥಳೀಯ ಗ್ರಾಮಸ್ಥರು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಎಎಸೈ ಮಹಾವೀರ ಕಾಂಬಳೆ ಇದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ, ಪಶುವೈದ್ಯಕೀಯ, ಅರಣ್ಯ, ಹೆಸ್ಕಾಂ, ಗ್ರಾ.ಪಂ, ಪೊಲೀಸ್, ಕೃಷಿ, ತೋಟಗಾರಿಕೆ, ಅಬಕಾರಿ ಹೀಗೆ ಮೊದಲಾದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್ ಸ್ವಾಗತಿಸಿದರು. ತಹಶೀಲ್ದಾರ್ ಕಾರ್ಯಾಲಯದ ಗೋಪಿ ಚೌವ್ಹಾಣ್ ವಂದಿಸಿದರು. ರವಿ ಕಮ್ಮಾರ್ ನಿರೂಪಿಸಿದರು. ದೀಪಾಲಿ ಪೆಡ್ನೇಕರ್, ಗ್ರಾ.ಪಂ ಕಾರ್ಯದರ್ಶಿ ಸತೀಶ್ ಮೊದಲಾದವರು ಸಹಕರಿಸಿದರು. ಆಧಾರ್ ನೋಂದಣಿ, ತಿದ್ದುಪಡಿ, ಮತದಾರರ ಗುರುಚಿನ ಚೀಟಿ ಕುರಿತಂತೆ ವಿವಿಧ ಅರ್ಜಿಗಳನ್ನು ಸ್ಥಳದಲ್ಲಿ ಸ್ವೀಕರಿಸಿ, ಸ್ಥಳದಲ್ಲೆ ಪರಿಹಾರ ನೀಡಲಾಯಿತು.