ಕುಮಟಾ: ತಾಲೂಕಿನ ದೀವಗಿಯ ನವಗ್ರಾಮದಲ್ಲಿರುವ ಕಂದಾಯ ಇಲಾಖೆಯ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರೂ ಅಧಿಕಾರಿಗಳುನಿರ್ಲಕ್ಷ್ಯ ವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ದೀವಗಿ ಗ್ರಾಪಂ ವ್ಯಾಪ್ತಿಯ ನವಗ್ರಾಮದ ಸರ್ವೆ ನಂಬರ್ 96ಅ1ಅ1ಅ2ನಲ್ಲಿ 8 ಗುಂಟೆ ಜಮೀನು ಕಂದಾಯ ಇಲಾಖೆಗೆ ಸಂಬಂಧಿಸಿದ್ದು, ಗ್ರಾಮ ಚಾವಡಿ ಕಟ್ಟಕ್ಕೆ 5 ಗುಂಟೆ ಮತ್ತು ಅಂಗನವಾಡಿಗೆ 3 ಗುಂಟೆ ಜಾಗವನ್ನು ಮೀಸಲಿಡಿಸಲಾಗಿದೆ. ಆ ಜಾಗವನ್ನು ಕೆಲ ಪ್ರಭಾವಿಗಳು ಅತಿಕ್ರಮಿಸಿಕೊಂಡು, ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಒಬ್ಬರು ಜಮೀನನ್ನು ಹದಗೊಳಿಸಿ, ಪಾಯ ತೋಡಿದ್ದರೆ, ಇನ್ನೊಬ್ಬರು ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಅಲ್ಲಿನ ಕಂದಾಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಒತ್ತಡದ ಕಾರಣಕ್ಕೆ ಕಂದಾಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಅತಿಕ್ರಮಣದಾರರು ಈ ಜಾಗವನ್ನು ಕಂದಾಯ ಇಲಾಖೆ ನಮಗೆ ಪಟ್ಟಾ ನೀಡಿದೆ ಎಂದು ಹೇಳಿಕೊಳ್ಳುತ್ತಿರುವುದು ತಿಳಿದುಬಂದಿದೆ. ಆ ಪಟ್ಟಾದ ದಾಖಲಾತಿಗಳ ಬಗ್ಗೆ ಕಂದಾಯ ಇಲಾಖೆ ಪರಿಶೀಲಿಸಿ, ಅದು ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ಒಂದು ವೇಳೆ ನಕಲಿ ಪಟ್ಟಾ ಆಗಿದ್ದರೆ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಜೊತೆಗೆ ಅತ್ರಿಕ್ರಮಣವನ್ನು ಖುಲ್ಲಾಪಡಿಸಬೇಕೆಂಬುದು ಅಲ್ಲಿನ ಕೆಲ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಕಂದಾಯ ಜಮೀನಿನಲ್ಲಿ ಕಟ್ಟಡ ನಿರ್ಮಿಸುತ್ತಿರುವ ಪ್ರಭಾವಿಗಳಿಗೆ ಗ್ರಾಮ ಪಂಚಾಯತ್‌ನಿಂದ ಯಾವುದೇ ಪರವಾನಗಿ ನೀಡಿಲ್ಲ ಎಂದು ದೀವಗಿ ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈ ಜಾಗ ಪಂಚಾಯತ್‌ಗೆ ಸಂಬಂಧಿಸಿಲ್ಲ. ಕಂದಾಯ ಇಲಾಖೆ ಜಾಗವಾಗಿದ್ದರಿಂದ ಆ ಇಲಾಖೆಯ ಅಧಿಕಾರಿಗಳೇ ಈ ಬಗ್ಗೆ ಕ್ರಮ ವಹಿಸಬೇಕೆಂದು ಅವರು ತಿಳಿಸಿದ್ದಾರೆ. ಇನ್ನು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ, ನಮ್ಮ ಗ್ರಾಮ ಚಾವಡಿಗೆ ಸಂಬಂಧಿಸಿದ 5 ಗುಂಟೆ ಜಾಗದಲ್ಲಿ ಯಾವುದೇ ಅತಿಕ್ರಮಣವಾಗಿಲ್ಲ. ಇನ್ನು ಅಂಗನವಾಡಿಗೆ ಸಂಬಂಧಿಸಿದ ಜಾಗವನ್ನು ಆ ಇಲಾಖೆಯವರು ಭದ್ರಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅತಿಕ್ರಮವಾದರೆ ಅದನ್ನು ಖುಲ್ಲಾಪಡಿಸುವ ಅಧಿಕಾರಿ ಗ್ರಾಪಂ ಅಧಿಕಾರಿಗಳು ಹೊಂದಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ನಮಗೆ ಸಂಬಂಧಿಸಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿರುವ ಪಂಚಾಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಇಲಾಖೆಯ ಜಾಗದಲ್ಲಿ ಒಂದು ವೇಳೆ ಅತಿಕ್ರಮಣವಾಗಿದ್ದರೆ ಆ ಬಗ್ಗೆ ಪರಿಶೀಲಿಸುತ್ತೇನೆ. ಸರ್ವೆ ಬಳಿಕ ಅತಿಕ್ರಮಣವಾಗಿರುವುದು ಖಚಿತಪಟ್ಟರೆ, ಖುಲ್ಲಾಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ವಿವೇಕ ಶೇಣ್ವಿ, ತಹಸೀಲ್ದಾರ್ ಹೇಳಿದ್ದಾರೆ