ಅಂಕೋಲಾ: ಮಂಜಗುಣಿ- ಗಂಗಾವಳಿ ನದಿ ಸೇತುವೆ ಕಾಮಗಾರಿ ಮುಗಿದಿದ್ದು, ಈಗ ರಸ್ತೆಯ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ನೀಡಲಿದ್ದೇವೆ. ಇನ್ನು ಮಂಜಗುಣಿ ಶಾಲೆ ಸ್ಥಳಾಂತರದ ಕುರಿತು ಉಂಟಾಗಿರುವ ವದಂತಿಗಳು ಸುಳ್ಳಾಗಿದ್ದು, ಎಷ್ಟು ಕೊಠಡಿ ಹೋಗುತ್ತದೆಯೋ ಅಷ್ಟನ್ನೇ ಮಾತ್ರ ಕಟ್ಟಿಕೊಡಲಾಗುತ್ತದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಇಂಜಿನೀಯರ್ ಸಂತೋಷ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸೇತುವೆ ಕಾಮಗಾರಿಯ ಪ್ರಗತಿ ಹಾಗೂ ಶಾಲಾ ಸಮಸ್ಯೆಯ ಕುರಿತು ನಡೆದ ಸಭೆಯಲ್ಲಿ ಅವರು ಸ್ಪಷ್ಟನೆ ನೀಡಿದರು. ಈ ಸೇತುವೆಗಾಗಿ ಶಾಲೆ ತೆರವುಗೊಂಡರೆ ಈಗಾಗಲೇ ಇರುವ ವಿದ್ಯಾನಗರದಲ್ಲಿ 7 ಕೊಠಡಿ, 1 ಸಭಾಭವನ, 2 ಎಕರೆ ಜಾಗಕ್ಕೆ ಕಂಪೌಡ್ ನಿರ್ಮಿಸಿಕೊಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕಾಮಗಾರಿ ವೇಳೆ ಒಂದು ಕೊಠಡಿ ಹೋದರೆ ಒಂದು ಅಥವಾ ಎರಡು ಕೊಠಡಿಯನ್ನು ಮಾತ್ರ ನಿರ್ಮಿಸಿಕೊಡಲಾಗುತ್ತದೆ. ಯಾರೋ ಅಂತೆಕಂತೆಗಳನ್ನು ಅದಕ್ಕೆ ನಾವು ಜವಾಬ್ದಾರರಲ್ಲ ಎಂದರು.
ತಹಸೀಲ್ದಾರ್ ಉದಯ ಕುಂಬಾರ ಮಾತನಾಡಿ, ಇಂತಹ ವದಂತಿಗಳು ಸಾಮಾನ್ಯವಾಗಿದೆ. ಶಾಲೆ ತೆರವುಗೊಳ್ಳದಿರುವುದರಿಂದ ಈಗ ಆ ಸಮಸ್ಯೆ ಉದ್ಭವಿಸುವುದಿಲ್ಲ. ಆದಷ್ಟು ಶೀಘ್ರ ರಸ್ತೆ ನಿರ್ಮಿಸಬೇಕು. ಈ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗದಂತೆ ಸಂಚರಿಸಲು ಒಂದು ಕಾಲುದಾರಿಯಿದ್ದು, ಕಾಮಗಾರಿ ಆರಂಭಿಸಿದ ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಸ್ಥಳೀಯರ ಸಂಚಾರಕ್ಕೆ ಪ್ರತ್ಯೇಕ ರಸ್ತೆ ನಿರ್ಮಿಸಿಕೊಡಬೇಕು. ಜತೆಗೆ ಸೇತುವೆ ನಿರ್ಮಾಣಕ್ಕೆ ಗಂಗಾವಳಿ ನದಿಗೆ ಹಾಕಲಾಗಿದ್ದ ಮಣ್ಣನ್ನು ಬಾರ್ಜ್ ಮೂಲಕ ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದರು.
ಸ್ಥಳೀಯ ಪ್ರಮುಖರಾದ ಶ್ರೀಪಾದ ಟಿ.ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ವಿ.ನಾಯ್ಕ ಮಾತನಾಡಿ, ಒಂದು ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ, ಸಭಾಭವನ, ಕಂಪೌಡ್ ನಿರ್ಮಿಸಿಕೊಡುವುದಾದರೆ ನಾವು ಸ್ವಾಗತಿಸುತ್ತೇವೆ. ಆದರೆ ಕೆಲವರು ಅನಗತ್ಯವಾಗಿ ಗೊಂದಲ ಉಂಟುಮಾಡುತ್ತಿದ್ದಾರೆ. ಇನ್ನು ಮುಂದಾದರೂ ಅವರು ಇಂತಹ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ಪಾಲಕರಲ್ಲಿ ಗೊಂದಲ ಮೂಡಿಸಬೇಡಿ ಎಂದರು.
ಬೆಳಸೆ ಗ್ರಾ.ಪಂ. ಮಾಜಿ ಸದಸ್ಯ ರಮೇಶ ಗೌಡ ಶಿರೂರು ಮಾತನಾಡಿ, ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣನ್ನು ಸಂಪೂರ್ಣವಾಗಿ ತೆಗೆಯಬೇಕು. ಈ ಹಿಂದೆ ಹೇಳಿದಾಗ ಮಳೆಗಾಲ ಮುಗಿದ ನಂತರ ಬಾರ್ಜ್ ಮೂಲಕ ತೆಗೆಯುವುದಾಗಿ ಹೇಳಿದ್ದೀರಿ. ಈಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ಮಹಾದೇವ ಗುನಗಾ, ಸದಸ್ಯ ವೆಂಕಟರಮಣ ಕೆ.ನಾಯ್ಕ, ಮಂಜಗುಣಿ ಗ್ರಾಮಸ್ಥರಾದ ಜೈವಂತ ನಾಯ್ಕ, ಹಮ್ಮು ನಾಯ್ಕ, ಶಾಂತಾರಾಮ ನಾಯ್ಕ, ಪ್ರಶಾಂತ ವಿ.ನಾಯ್ಕ, ಈಶ್ವರ ಎಸ್.ನಾಯ್ಕ, ನಾಗರಾಜ ಎಚ್.ನಾಯ್ಕ ಇತರರಿದ್ದರು.