ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿ ನೀಡಲು ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯು ಸಂವಿಧಾನ ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಗ ಎಮ್ ತ್ರಿವೇದಿ ಹಾಗೂ ಜೆ ಬಿ ಪರಿದಿವಾಲಾ ಅವರನ್ನು ಒಳಗೊಂಡ ಸಂವಿಧಾನ ಪೀಠ ಈ ತೀರ್ಪನ್ನು ನೀಡಿದೆ.
ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ನ್ಯಾಯಮೂರ್ತಿಗಳು ಸಂವಿಧಾನಕ್ಕೆ ತರಲಾದ 103ನೇ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿದ್ದಾರೆ. ಉಳಿದ ಇಬ್ಬರು ಭಿನ್ನ ತೀರ್ಪು ನೀಡಿದ್ದಾರೆ.
ಬಡವರಿಗಾಗಿನ ಕೋಟಾವು ತಾರತಮ್ಯವಲ್ಲ ಮತ್ತು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಪೀಠದ ಬಹುಮತದ ತೀರ್ಪು ಹೇಳಿದೆ.
2019 ರ ಸಾರ್ವತ್ರಿಕ ಚುನಾವಣೆಗೂ ಸ್ವಲ್ಪ ಮೊದಲು ಪರಿಚಯಿಸಲಾದ ಬಡವರಿಗೆ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗಗಗಳಿಗೆ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಶೇಕಡಾ 10 ರಷ್ಟು ಕೋಟಾವನ್ನು ಸುಪ್ರೀಂಕೋರ್ಟ್ ಬೆಂಬಲಿಸಿದ್ದು ಸರ್ಕಾರಕ್ಕೆ ದೊರೆತ ದೊಡ್ಡ ಗೆಲುವಾಗಿದೆ.
ಕೃಪೆ:-news13.in