Slide
Slide
Slide
previous arrow
next arrow

ನೀರಿನ ಮಾಹಿತಿಗೆ ನೋಂದಣಿ ಬುಕ್ ಕಡ್ಡಾಯವಾಗಿ ನಿರ್ವಹಿಸಿ: ಸಿಇಒ

300x250 AD

ಅಂಕೋಲಾ: ಗ್ರಾಮೀಣ ಭಾಗದಲ್ಲಿ ಆರ್‌ಡಬ್ಲ್ಯೂಎಸ್ ಹಾಗೂ ನಗರ ನೀರು ಸರಬರಾಜು ಇಲಾಖೆಯಿಂದ ಪೂರೈಸುವ ನೀರಿನ ಮಾಹಿತಿಗಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ನೋಂದಣಿ ಬುಕ್ ಅನ್ನು ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗಾ ಎಂ. ಅವರು ಸೂಚಿಸಿದರು.
ತಾಲೂಕಿನ ಹಾರವಾಡ, ಅವರ್ಸಾ ಹಾಗೂ ಕಾರವಾರ ತಾಲೂಕಿನ ಚಂಡಿಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.
ನೇರವಾಗಿ ಸ್ವತಃ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಸಿಇಒ ಅವರು, ಈ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮ, ಮಜಿರೆಗಳಲ್ಲಿನ ಮನೆಗಳಿಗೆ ಗುಣಮಟ್ಟದ ನಳ ಸಂಪರ್ಕ, ಪೈಪಲೈನ್ ಮತ್ತು ಮೀಟರ್ ಅಳವಡಿಕೆ, ಸಮರ್ಪಕ ನೀರಿನ ಸರಬರಾಜು, ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಹಾಗೂ ಪ್ರತಿ ಮನೆಗಳಿಗೆ ಪೂರೈಸಲಾಗುತ್ತಿರುವ ನೀರಿನ ಪ್ರಮಾಣದ ಕುರಿತು ಸ್ಥಳದಲ್ಲಿದ್ದ ಗ್ರಾ.ಪಂ ಜನಪ್ರತಿನಿಧಿಗಳು, ಪಿಡಿಒ, ಆರ್‌ಡಬ್ಲ್ಯೂಎಸ್‌ನ ಇಇ, ಎಇಇ, ಜೆಇ, ಎಇ ಹಾಗೂ ನಗರ ನೀರು ಸರಬರಾಜು ಇಲಾಖೆಯ ಎಇಇ, ಜೆಇ ಅವರಿಂದ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ನೋಂದಣಿ ಬುಕ್ ಮಾಡಿಕೊಂಡು ಗ್ರಾಪಂ ವ್ಯಾಪ್ತಿಯಲ್ಲಿ ಆರ್‌ಡಬ್ಲ್ಯೂಎಸ್ ಹಾಗೂ ನಗರ ನೀರು ಸರಬರಾಜು ಇಲಾಖೆಯಿಂದ ಪ್ರತಿದಿನ ಪೂರೈಸಲಾಗುವ ನೀರಿನ ಪ್ರಮಾಣ, ಸಮಯ, ಗುಣಮಟ್ಟ, ಸಮರ್ಪಕ ನೀರು ಪೂರೈಕೆಯ ಮಾಹಿತಿ ನಮೂದಿಸಬೇಕು. ಜೊತೆಗೆ ಗ್ರಾಮ ಪಂಚಾಯತಿ ಮತ್ತು ನಗರ ನೀರು ಸರಬರಾಜು ಇಲಾಖೆಯ ವಾಟರ್ ಮ್ಯಾನ್‌ಗಳು ಸಹಿ ಹಾಕಬೇಕು. ಈ ಮಾಹಿತಿ ಒಳಗೊಂಡ ವರದಿಯನ್ನು ಜಿಲ್ಲಾ ಪಂಚಾಯತ್ ಹಾಗೂ ಅರ್‌ಡಬ್ಲ್ಯೂಎಸ್‌ಗೆ ನೀಡಬೇಕು. ಇದರ ಜವಾಬ್ದಾರಿಯನ್ನು ಪಿಡಿಒ ಹಾಗೂ ಎಇಇ ಅವರು ನಿರ್ವಹಿಸಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ನೀರು ಬಿಡುತ್ತಿಲ್ಲ. ಬಿಟ್ಟರೂ ೪ರಿಂದ 7 ದಿನಕ್ಕೊಮ್ಮೆ ಬಿಡುತ್ತಾರೆ. ಜೆಜೆಎಂ ಯೋಜನೆಯಡಿ ಸರಿಯಾಗಿ ನಳ ಸಂಪರ್ಕ ಕೊಟ್ಟಿಲ್ಲ. ಗುಣಮಟ್ಟದ ಪೈಪ್‌ಗಳ ಜೋಡಣೆ ಬದಲಾಗಿ ಹಳೆಯ ಪೈಪ್‌ಗಳ ಮೂಲಕವೇ ನೀರು ಸರಬರಾಜು ಮಾಡುತ್ತಿದ್ದಾರೆ ಎಂಬ ಸ್ಥಳೀಯ ಜನರ ದೂರುಗಳ ಹಿನ್ನಲೆಯಲ್ಲಿ ಈ ಎಲ್ಲ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಲಾಗಿದೆ. ಹೀಗಾಗಿ ಅಧಿಕಾರಿಗಳು ಬೇಜವಾಬ್ದಾರಿತನ ತೋರದೆ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು. ಗ್ರಾಪಂ ಮಟ್ಟದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಸ್ಪರ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಯೋಜನೆ ಯಶಸ್ವಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಇದೇವೆಳೆ ಹಾರವಾಡ ಹಾಗೂ ಅವರ್ಸಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿ, ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹಾಗೂ ಮಕ್ಕಳ ಹಾಜರಾತಿ ಪರಿಶೀಸಿದರು. ಜೊತೆಗೆ ಮಕ್ಕಳಿಗೆ ಹಾಲು, ಬಿಸ್ಕತ್ತು, ಊಟ, ಆಹಾರ ಪದಾರ್ಥಗಳನ್ನು ಸರಿಯಾದ ಸಮಯಕ್ಕೆ ವಿತರಿಸುತ್ತಾರೋ ಇಲ್ಲವೋ ಎಂಬ ಮಾಹಿತಿನ್ನು ಮಕ್ಕಳಿಂದಲೇ ಪಡೆದುಕೊಂಡರು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರದ ಸುತ್ತಲಿನ ಜಾಗದಲ್ಲಿ ತರಕಾರಿ ಬೆಳೆದು ಆ ತರಕಾರಿ ಬಳಸಿಕೊಂಡು ಮಕ್ಕಳಿಗೆ ಆಹಾರ ತಯಾರಿಸಿ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳ ಜನಪ್ರತಿನಿಧಿಗಳು, ಆರ್‌ಡಬ್ಲ್ಯೂಎಸ್‌ನ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ ಕೆ.ಇ.ಎಸ್., ಎಇಇ ಕಿರಣ ಚೇಳ್ಕರ್, ನಗರ ನೀರು ಸರಬರಾಜು ಇಲಾಖೆಯ ಎಇಇ ಶಿವರಾಮ ನಾಯ್ಕ, ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ವೈ. ಸಾವಂತ, ನರೇಗಾ ಸಹಾಯಕ ನಿರ್ದೇಶಕರಾದ ಸುನಿಲ್ ಎಂ., ಜೆಇ ವಿ.ಎಸ್. ಬಾಲಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸೀತಾ ಮೇತ್ರಿ, ಲಕ್ಷ್ಮೀ ಗೌಡ, ನಾಗೇಶ್ವರ ತೆಂಡೂಲ್ಕರ್, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ, ಟಿಸಿ ಅನಿಲ ಗಾಯತ್ರಿ, ಸಹಾಯಕ ಇಂಜಿನಿಯರ್‌ಗಳಾದ ರಾಘವೇಂದ್ರ ನಾಯ್ಕ, ಚೈತನ್ಯ ಬೋರ್ಕರ್, ದರ್ಶನ ದುರ್ಗೇಕರ ಸೇರಿದಂತೆ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top