• Slide
    Slide
    Slide
    previous arrow
    next arrow
  • ರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಶಿಬಿರ 18ಕ್ಕೆ

    300x250 AD

    ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ನ.18ರಂದು ಜಿಲ್ಲಾ ವಿಜ್ಞಾನ ಮೇಳ ಮತ್ತುರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಶಿಬಿರ ಆಯೋಜಿಸಿದ್ದೇವೆ ಎಂದು ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಮುಖ್ಯಸ್ಥ ಡಾ.ಜಿ.ಜಿ.ಹೆಗಡೆ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಅಧ್ಯಯನ, ಆಸಕ್ತಿ ಹಾಗೂ ನಾವಿನ್ಯಯುತ ಚಿಂತನೆಗಳೊಂದಿಗೆ ವಿಜ್ಞಾನ ವಿಷಯದತ್ತ ಒಲವು ಮೂಡಿಸಿ, ಚಿಕಿತ್ಸಕ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಲು ನ.18ರ ಬೆಳಗ್ಗೆ 10 ಗಂಟೆಗೆ ಶಿಬಿರ ಆರಂಭವಾಗಲಿದೆ. ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಆಶ್ರಯದಲ್ಲಿ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಜ್ಞಾನ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
    ಸೆಲ್ಕೋ ಸಂಸ್ಥಾಪಕ ಹಾಗೂ ರಾಮೋನ್ ಮ್ಯಾಗ್ನೆಸ್ಸ್ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ ಡಾ.ಎಚ್.ಹರೀಶ ಹಂದೆ ದಿಕ್ಸೂಚಿ ಭಾಷಣ ಮಾಡಲಿದ್ದು, ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ , ಜಿ.ಎನ್.ಹೆಗಡೆ ಟ್ರಸ್ಟ್ ಅಧ್ಯಕ್ಷ ಹಾಗೂ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಮುಖ್ಯಸ್ಥ ಡಾ.ಜಿ.ಜಿ.ಹೆಗಡೆ, ದೇವಗಿರಿ ಗ್ರಾ.ಪಂ ಅಧ್ಯಕ್ಷೆ ರತ್ನಾ ಹರಿಕಾಂತ ಪಾಲ್ಗೊಳ್ಳಲಿದ್ದಾರೆ ಎಂದರು.
    ಮಧ್ಯಾಹ್ನ 12 ಘಂಟೆಗೆರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಡಯಟ್ ಉಪಪ್ರಾಚಾರ್ಯ ಜಿ.ಎಸ್.ಭಟ್ಟ ಉಪನ್ಯಾಸ ಮತ್ತು ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2.30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ದಿನಕರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಕಾರವಾರ ಡಿ.ಡಿ.ಪಿ.ಐ ಈಶ್ವರ ನಾಯ್ಕ, ಡಯಟ್ ಪ್ರಾಂಶುಪಾಲ ಎನ್.ಜಿ.ನಾಯಕ, ಶಿರಸಿ ಡಿ.ಡಿ.ಪಿ.ಐ ಪರಿ ಬಸವರಾಜ, ಸೆಲ್ಕೋ ಡಿ.ಜಿ.ಎಂ ಗುರುಪ್ರಕಾಶ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
    ಭಾರತದ ಅಭಿವೃದ್ಧಿಯಲ್ಲಿ ನವೀಕರಿಸಬಹುದಾದ ಇಂಧನದ ಪಾತ್ರ ಎಂಬ ವಿಷಯದ ಮೇಲೆ ಪ್ರಬಂಧ ನಡೆಸಲಾಗುತ್ತಿದ್ದು, ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯ ಎಲ್ಲ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದಲ್ಲಿ ನವೆಂಬರ್ ಮೊದಲ ವಾರದಲ್ಲಿ ನಡೆಸಿ, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಪರ್ಧಾ ವಿಜೇತರ ಯಾದಿಯನ್ನು ನ.15 ರ ಒಳಗೆ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಪ್ರಾಚಾರ್ಯರಿಗೆ ಕಳುಹಿಸಲು ತಿಳಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ನಂತರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ನಡೆಯಲಿದೆ. ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ ಹಾಗೂ ತೃತೀಯ 2 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ ಎಂದರು.
    ಅದೇ ದಿನ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ಮತ್ತು ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ನೀಡಲಾಗುವುದು. ಭೌತಶಾಸ್ತ್ರ ರಸಾಯನ ಶಾಸ್ತ್ರ ಗಣಿತ, ಭೂಮಿ ಮತ್ತು ಬಾಹ್ಯಾಕಾಶ, ಬಯೋಸೈನ್ಸ್ ಮತ್ತು ಬಯೋ ಕೆಮಿಸ್ಟ್ರಿ , ಪರಿಸರ ವಿಜ್ಞಾನ, ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳ ಮೇಲೆ ಮಾದರಿಗಳನ್ನು ತಯಾರಿಸಬಹುದು. ತಾಲೂಕಾ ಮಟ್ಟದಲ್ಲಿ ವಿಜ್ಞಾನ ಮಾದರಿ ಸ್ಪರ್ಧೆಯನ್ನು ಸಂಘಟನೆ ಮಾಡಿ 5 ವಿಜೇತರ ಯಾದಿಯನ್ನು ಕಳುಹಿಸಲು ತಿಳಿಸಲಾಗಿದೆ. ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ, ತೃತೀಯ 2 ಸಾವಿರ, ಇಬ್ಬರಿಗೆ ಸಮಾಧಾನಕರ ಬಹುಮಾನ ತಲಾ 1 ಸಾವಿರ ನಿಗದಿಪಡಿಸಲಾಗಿದೆ. ಭಾಗವಹಿಸುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪ್ರಯಾಣ ಭತ್ಯ ಭರಿಸಲಾಗುತ್ತದೆ. ಕುಮಟಾ ಬಸ್ ನಿಲ್ದಾಣದಿಂದ ಕಾಲೇಜಿಗೆ ನ.18 ರಂದು ಬೆಳಿಗ್ಗೆ 9 ಘಂಟೆಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯ ಡಿ.ಎನ್.ಭಟ್ಟ (9449477473), ಉಪ ಪ್ರಾಚಾರ್ಯ ಹರ್ಷ ಉಪಾಧ್ಯಾಯ (6361036717) ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
    ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಸೆಲ್ಕೋ ಡಿ.ಜಿ.ಎಂ ಗುರುಪ್ರಕಾಶ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ.ನಾಯಕ, ಸೆಲ್ಕೋ ವ್ಯವಸ್ಥಾಪಕ ದತ್ತಾರಾಮ ಭಟ್ಟ, ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಪ್ರಾಚಾರ್ಯ ಡಿ.ಎನ್.ಭಟ್ಟ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top