ಶಿರಸಿ: ಗಾಂಧಿ ನಗರದ ಶಾರದಾ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತ ಸಮ್ಮೇಳನವು ಮೇರು ಕಲಾವಿದರ ಹಾಗೂ ಯುವ ಕಲಾವಿದರ ಕೂಡುವಿಕೆಯಿಂದ ಶ್ರೋತೃಗಳಿಗೆ ಇಡೀದಿನ ಸಂಗೀತದ ರಸದೌತಣವನ್ನೇ ನೀಡಿತು.
ಬೆಳಿಗ್ಗೆ 9 ರಿಂದಲೇ ಸಂಗೀತ ವಿದ್ಯಾಲಯದ ಹಿರಿ-ಕಿರಿಯ ಕಲಾವಿದರು ಬೆಳಗಿನ ಪ್ರಹರದ ರಾಗಗಳನ್ನು ಪ್ರಸ್ತುತಪಡಿಸಿದರು. ಮಧ್ಯಾಹ್ನದ ವೇಳೆಗೆ ಮದ್ಯಾಹ್ನದ ಪ್ರಹರದ ರಾಗಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿ ಭರವಸೆಯ ಬೆಳಕನ್ನು ಚೆಲ್ಲಿದರು. ಶ್ರೀಮತಿ ಭಾರತೀ ಗೋಕರ್ಣ, ಭಾರತಿ ಆಲ್ಮನೆ ಮುಂತಾದ ಹಿರಿಯ ಕಲಾವಿದರೂ ಕೂಡ ತಮ್ಮ ಕಚೇರಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು. ಹರಿಶ್ಚಂದ್ರ ನಾಯಕ ಹಾರ‍್ಮೋನಿಯಂ ಸಾಥ್ ನೀಡಿದರು.
2ನೇ ಅಧಿವೇಶನದಲ್ಲಿ ಸಂಗೀತ ಕ್ಷೇತ್ರದ ಮೇರು ಕಲಾವಿದರ ಸಂಗಮದಿಂದ ಇಡೀ ಸಂಗೀತ ಸಮ್ಮೇಳನವೇ ಹಬ್ಬದ ವಾತಾವರಣದಲ್ಲಿ ಸಂಗೀತದ ಗುಂಜಾರಾವ ಅಲೆ ಅಲೆಗಳು ಸಂಗೀತಾಸಕ್ತರಿಗೆ ರಸಾನಂದ ನೀಡಿ ಸಂಗೀತ ಗಂಧರ್ವ ಲೋಕಕ್ಕೆ ಕರೆದೊಯ್ಯಿತು.
ನಾಡಿನ ಖ್ಯಾತ ಗಾಯಕ ಡಾ|| ಕೃಷ್ಣಮೂರ್ತಿ ಭಟ್ ರಾಗ ಮಧುವಂತಿಯಿಂದ ತಮ್ಮ ಕಾರ್ಯಕ್ರಮವನ್ನು ವಿಲಂಬಿತ ಹಾಗೂ ಧೃತಲಯದಲ್ಲಿ ಖ್ಯಾಲ್‌ನ್ನು ವಿದ್ವತ್ಪೂರ್ಣವಾಗಿ ಹಾಡಿ ಕೇಳುಗರ ಮನತಣಿಸಿದರು. ನಂತರ ರಾಗ ಯಮನ್‌ದಲ್ಲಿ ಹಾಡಿದ ಭಕ್ತಿ ಗೀತೆ ಶೃಂಗಾರ ರಸದ ಹೊನಲನ್ನು ಹರಿಸಿತು. ಇವರಿಗೆ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಹಾರ‍್ಮೋನಿಯಂ ಸಾಥ್ ನೀಡಿದರೆ ಧಾರವಾಡದ ನಾಗಭೂಷಣ ಗುಡ್ಡದಮಠ ಉತ್ತಮ ತಬಲಾ ಸಾಥ್ ನೀಡಿದರು. ಅನಂತಮೂರ್ತಿ ತಾಳದಲ್ಲಿ ಸಹಕರಿಸಿದರು. ಕುಮಾರಿ ಸ್ವಾತಿ ತಂಬೂರಾ ಸಾಥ್ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾದ ಯುವ ಕಲಾವಿದ ಉಸ್ತಾದ ಮೌಸಿನಖಾನ್ ರಾಗ ಬಿಹಾಗ್‌ದಿಂದ ತಮ್ಮ ಕಾರ್ಯಕ್ರಮ ಪ್ರಾರಂಭಿಸಿದರು. ಸಿತಾರದಲ್ಲಿ ಆಲಾಪ್ ಜೋಡ್ ಝಾಲಾ ಹಾಗೂ ವಿಲಂಬಿತ್ ಹಾಗೂ ಧೃತ್‌ಗತ್‌ಗಳನ್ನು ಅತ್ಯದ್ಭುತವಾಗಿ ತಮ್ಮ ಸಿತಾರ್ ವಾದನದಲ್ಲಿ ಶ್ರೋತೃಗಳಿಗೆ ಉಣಬಡಿಸಿದರು. ಕೊನೆಯಲ್ಲಿ ಭೈರವಿ ದುನ್‌ನೊಂದಿಗೆ ಕಾರ್ಯಕ್ರಮ ಮುಗಿಸಿದಾಗ ರಾತ್ರಿಯ ಪ್ರಥಮ ಪ್ರಹರ ಮುಗಿದಿತ್ತು. ಇವರಿಗೆ ಆಕಾಶವಾಣಿ ದೂರದರ್ಶನದ ಎ ಶ್ರೇಣಿ ಕಲಾವಿದರಾದ ಪಂ|| ರಾಜೇಂದ್ರ ನಾಕೋಡ ಅವರು ಅದ್ಭುತವಾಗಿ ತಬಲಾ ಸಾಥ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕ,ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಭಟ್ಟ ಬೊಮ್ನಳ್ಳಿ, ಇವರನ್ನು ‘ಗಾನಕಲಾನಿಧಿ’ ಬಿರುದನ್ನು ನೀಡಿ ಸತ್ಕರಿಸಲಾಯಿತು. ಸಭೆಯಲ್ಲಿ ಸಂಗೀತ ಪ್ರೇಮಿ ಮಾಜಿ ಪ್ರಾಚಾರ್ಯ ಆರ್.ಎಸ್. ಹೆಗಡೆ ಬೆಳ್ಳಿಕೇರಿ, ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದ್ವಾಂಸರಾದ ಪ್ರಾಚಾರ್ಯೆ ವಿದೂಷಿ ವತ್ಸಲಾ ಮಾಪಾರಿ ಉಪಸ್ಥಿತರಿದ್ದರು. ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ವಿಠ್ಠಲದಾಸ ಕಾಣೇಕರ್ ಸ್ವಾಗತಿಸಿದರು. ಅನೇಕ ಸಂಸ್ಥೆಯ ಉಮೇಶ ನಾಯ್ಕ ನಿರೂಪಿಸಿದರು. ಯಜ್ಞೇಶ್ವರ ನಾಯ್ಕ ವಂದಿಸಿದರು. ಬೆಳಗಿನ ಪ್ರಥಮ ಪ್ರಹರದಿಂದ ಪ್ರಾರಂಭವಾದ ಸಂಗೀತ ರಾತ್ರಿಯ ಪ್ರಥಮ ಪ್ರಹರದವರೆಗೂ ಶ್ರೋತೃಗಳಿಗೆ ರಸದೌತಣ ನೀಡಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಿರಿಯ ಕಲಾವಿದರಾದ ಶಾರದಾ ಸಂಗೀತ ವಿದ್ಯಾಲಯದ ಪ್ರಾಚಾರ್ಯೆ ವಿದೂಷಿ ವತ್ಸಲಾ ಮಾಪಾರಿ ಹಾಗೂ ವಿಠ್ಠಲದಾಸ ಕಾಣೇಕರ್ ಅವರ ಬಳಗದ ಸಂಪೂರ್ಣ ಶ್ರಮ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.