ಹೊನ್ನಾವರ: ಕನ್ನಡ ಭಾಷೆಯು ಜಾಗತಿಕ ಭಾಷೆಯಾಗಿ ವಿಜೃಂಭಿಸಬೇಕು. ಈ ಭಾಷೆಯ ಉದ್ಧಾರಕ್ಕಾಗಿ ರಾಜ್ಯೋತ್ಸವದ ದಿನ ನಾವು ಕಟಿಬದ್ಧರಾಗಿ ಪ್ರತಿಜ್ಞೆಯನ್ನ ಮಾಡಬೇಕು ಎಂದು ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಕರೆ ನೀಡಿದರು.
ಅವರು ಪಟ್ಟಣದ ಪ್ರಭಾತನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತ ತಾಲೂಕು ಘಟಕದ ನೂತನ ಕಚೇರಿ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಾಗತಿಕ ಭಾಷೆ ಇಂಗ್ಲಿಷ್ ಎಂದು ಹೇಳುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ ಭಾಷಾ ದೃಷ್ಟಿಯಿಂದಲೂ ಸಾಂಸ್ಕೃತಿಕವಾಗಿ ಆಗಲಿ ಅಥವಾ ಗಟ್ಟಿಯಾಗಿ ಇರತಕ್ಕಂತಹ ಪ್ರಪಂಚದ 20 ಭಾಷೆಗಳಲ್ಲಿ ಕನ್ನಡ ಅಗ್ರ ಪಂತಿಯಲ್ಲಿದೆ. ಶ್ರೇಷ್ಠವಾಗಿರುವಂತಹ ನಾಡಿನಲ್ಲಿ ನಾವು ಹುಟ್ಟಿದ್ದಕ್ಕಾಗಿ ಹೆಮ್ಮೆ ಪಡಬೇಕು. ಕೇವಲ ಹೆಮ್ಮೆ ಪಟ್ಟರೆ ಆಗಲ್ಲ ಎಂದ ಅವರು, ಅದ್ಭುತವಾದಂತಹ ಸಂಸ್ಕೃತಿ ಇರುವ ನಾಡು ಕರ್ನಾಟಕ. ಕನ್ನಡ ಸರ್ವ ಸ್ವತಂತ್ರವಾಗಿರುವ ಭಾಷೆಯಾಗಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್.ಗೌಡ, ಕಸಾಪ ಕಾರ್ಯಾಲಯವಾಗಲು ಸಹಕರಿಸಿದ ತಾಲೂಕಾ ಪಂಚಾಯತ ಹಾಗೂ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ, ತಾಲೂಕಾ ಘಟಕದ ಕಾರ್ಯದರ್ಶಿ ಎಚ್.ಎಮ್.ಮಾರುತಿ, ಗಜಾನನ ನಾಯ್ಕ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಮಹೇಶ್ ಭಂಡಾರಿ, ಸಾಧನಾ ಬರ್ಗಿ, ಜನಾರ್ಧನ ಕಾಣಕೋಣಕರ್, ಈಶ್ವರ ಗೌಡ, ಬಿ.ಎನ್.ಹೆಗಡೆ, ರಾಮಾ ಗೊಂಡ, ನಿವೃತ್ತ ಉಪನ್ಯಾಸಕ ಡಾ.ಎಸ್.ಡಿ.ಹೆಗಡೆ, ಮಂಜುನಾಥ ಗೌಡ ಮತ್ತಿತರಿದ್ದರು.