ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿ ಹೊರಹೊಮ್ಮಿರುವ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರು, ಭಾರತೀಯ ಕರೆನ್ಸಿಯಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಮೂಡಿಸುವಂತೆ ಸಲಹೆ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ತಮ್ಮ ಸರ್ಕಾರದ ದೋಷಗಳು ಮತ್ತು ಆಮ್ ಆದ್ಮಿ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯ ನಾಟಕದಲ್ಲಿ ತೊಡಗಿದ್ದಾರೆ ಎಂದಿದೆ.
“ಕೇಜ್ರಿವಾಲ್ ಅವರು ನೋಟಿನಲ್ಲಿ ದೇವರ ಚಿತ್ರ ಚಿತ್ರಿಸಲು ಹೇಳಿರುವುದು ಅವರ ಯು-ಟರ್ನ್ ರಾಜಕೀಯದ ಮತ್ತೊಂದು ವಿಸ್ತರಣೆಯಾಗಿದೆ. ಇದು ಅವರ ಬೂಟಾಟಿಕೆಯನ್ನು ತೋರಿಸುತ್ತಿದೆ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
“ಎಎಪಿ ಹಿಂದೂ ದೇವರು ಮತ್ತು ದೇವತೆಗಳನ್ನುಅವಹೇಳನ ಮಾಡಿದೆ. ಆದರೆ ಈಗ ಚುನಾವಣೆಗೆ ಮುನ್ನ ಮುಖ ಉಳಿಸಲು ಪ್ರಯತ್ನಿಸುತ್ತಿದೆ. ರಾಮಮಂದಿರಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು ಹೊಸ ಮುಖವಾಡ ಹಾಕಿಕೊಂಡು ಬಂದಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕ ಮನೋಜ್ ತಿವಾರಿ ಹೇಳಿದ್ದಾರೆ.
ಇನ್ನೊಂದೆಡೆ ಬಿಜೆಪಿ ನಾಯಕ ನಿತೇಶ್ ರಾಣೆ ಅವರು ಕರೆನ್ಸಿ ನೋಟಿನ ಮೇಲೆ ಶಿವಾಜಿ ಚಿತ್ರವನ್ನು ಹಾಕಿ, “ಯೇ ಪರ್ಫೆಕ್ಟ್ ಹೈ (ಇದು ಪರಿಪೂರ್ಣವಾಗಿದೆ)” ಎಂದು ಶೀರ್ಷಿಕೆ ನೀಡಿದ್ದಾರೆ.
ಕೃಪೆ:-http://news13.in