ಕಾರವಾರ: ಅಪಘಾತವಾಗಿ ಗಂಟೆ ಕಳೆದರೂ ಸ್ಥಳಕ್ಕೆ ಅಂಬ್ಯುಲೆನ್ಸ್ ಬಾರದಿರುವುದನ್ನ ಖಂಡಿಸಿ ಸ್ಥಳೀಯರು ಅಪಘಾತದ ಸ್ಥಳದಲ್ಲಿ ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಅಂಬ್ರಾಯಿಯ ಬಳಿ ನಡೆದಿದೆ.
ತಾಲೂಕಿನ ಅಂಬ್ರಾಯಿ ಬಳಿ ಮಗ ನಸ್ರುಲ್ಲಾ ಅವರ ಬೈಕ್‌ನಲ್ಲಿ ತಾಯಿ ನುಸ್ರತ್ ಸಾಗುತ್ತಿದ್ದರು. ಆದರೆ ದನವೊಂದು ಅಡ್ಡ ಬಂದ ಕಾರಣ ಬೈಕ್ ಸ್ಕಿಡ್ ಆಗಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ನಸ್ರುಲ್ಲಾಗೆ ಗಂಭೀರವಾದ ಗಾಯಗಳಾಗಿದ್ದು, ಅಂಬ್ಯುಲೆನ್ಸ್ಗೆ ಸ್ಥಳೀಯರು ಕರೆ ಮಾಡಿದ್ದಾರೆ.
ಕರೆ ಮಾಡಿ ಒಂದೂವರೆ ಗಂಟೆಯದರೂ ಅಂಬ್ಯುಲೆನ್ಸ್ ಮಾತ್ರ ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ. ಇದರಿಂದಾಗಿ ಗಾಯಗೊಂಡವರು ಅಪಘಾತದ ಸ್ಥಳದಲ್ಲೇ ಒದ್ದಾಡುತ್ತಿದ್ದರು. ಇದರಿಂದಾಗಿ ಸ್ಥಳೀಯರು ಕೂಡ ಅಪಘಾತದ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಬಳಿಕ ಅಂಬ್ಯುಲೆನ್ಸ್ ಬಂದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದಿದೆ.
ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳನ್ನು ಪರೀಕ್ಷಿಸಿದ ವೈದ್ಯರು ಮಂಗಳೂರಿಗೆ ಕೊಂಡೊಯ್ಯಲು ತಿಳಿಸಿದ್ದು, ಮಂಗಳೂರಿಗೆ ತಾಯಿ- ಮಗನನ್ನು ಕೊಂಡೊಯ್ಯಲಾಗಿದೆ. ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಆಗಮಿಸಿದ್ದ ಅಂಬ್ಯುಲೆನ್ಸ್ಗಳು ತಾಸು ಕಳೆದರೂ ಬಾರದೇ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ.