ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ದೆಹಲಿ ಪರಿಸರದಲ್ಲಿ ಮಾಲಿನ್ಯಕಾರಕಗಳ ಶೇಖರಣೆ ಹೆಚ್ಚಾಗಿದೆ. ಹೀಗಾಗಿ ಸೋಮವಾರ ಬೆಳಿಗ್ಗೆ ರಾಷ್ಟ್ರರಾಜಧಾನಿಯ ವಾಯು ಗುಣಮಟ್ಟವು ‘ಅತ್ಯಂತ ಕಳಪೆ’ ಮಟ್ಟಕ್ಕೆ ಕುಸಿದಿದೆ. ಇನ್ನೊಂದೆಡೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಡಿಸಲಾಗುತ್ತಿರುವ ಪಟಾಕಿಗಳು ಮತ್ತು ಕೃಷಿ ತ್ಯಾಜ್ಯ ದಹನದಿಂದಾಗಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದೆ.
ಭಾನುವಾರ ಸಂಜೆ, ದೆಹಲಿಯಲ್ಲಿ 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 259 ರಷ್ಟು ಇತ್ತು. ಇದು ಕಳೆದ ಏಳು ದೀಪಾವಳಿಯ ಅವಧಿಯಲ್ಲಿ ಅತ್ಯಂತ ಕಡಿಮೆ ವಾಯು ಗುಣಮಟ್ಟ ಎನಿಸಿಕೊಂಡಿತು. ತಾಪಮಾನ ಮತ್ತು ಗಾಳಿ ವೇಗದಲ್ಲಿ ಉಂಟಾದ ಕುಸಿತ ಮತ್ತು ರಾಜಧಾನಿಯ ಹಲವು ಭಾಗಗಳಲ್ಲಿ ಜನರು ಪಟಾಕಿಗಳನ್ನು ಸಿಡಿಸುತ್ತಿರುವುದರಿಂದ ಮಾಲಿನ್ಯದ ಮಟ್ಟವು ಭಾನುವಾರ ರಾತ್ರಿ ಏರಿಕೆಯಾಗಿದೆ. ಸೋಮವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ ಎಕ್ಯುಐ ಮಟ್ಟ 301 ತಲುಪಿ, ಗಾಳಿ ಗುಣಮಟ್ಟ ಹದಗೆಟ್ಟಿದೆ.