Slide
Slide
Slide
previous arrow
next arrow

ಮಾಹಿತಿ ಇಲ್ಲದೇ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ: ಗ್ರಾಮಸ್ಥರ ಆಕ್ಷೇಪ

300x250 AD

ಕುಮಟಾ: ತಾಲೂಕಿನ ಊರಕೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಬಗ್ಗೆ ಅಲ್ಲಿನ ಗ್ರಾಮಸ್ಥರಿಗೆ ಮಾಹಿತಿಯೇ ಇಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ದೊರಕಿಸಿಕೊಡಬೇಕೆಂಬ ಸದುದ್ದೇಶದಿಂದಲೇ ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಸರ್ಕಾರ ಜಾರಿ ಮಾಡಿದೆ. ಆದರೆ ತಾಲೂಕಿನ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಲೇ ಈ ಕಾರ್ಯಕ್ರಮ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಅಂಥ ಅಪಕೀರ್ತಿಗೆ ಕುಮಟಾ ತಾಲೂಕಿನ ಊರಕೇರಿಯ ಸರ್ಕಾರಿ ಶಾಲೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವೂ ಗುರಿಯಾಗಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮುಲೈಂ ಮುಗಿಲನ್ ಅವರು ಬರಲು ವಿಳಂಬವಾಗುವುದರಿಂದ ಡಿಸಿ ಸೂಚನೆ ಮೇರೆಗೆ ನಾನೇ ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸುತ್ತೇನೆ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ಅವರು ತಿಳಿಸಿದಾಗ ಆಕ್ಷೇಪಿಸಿದ ವಾಲಗಳ್ಳಿ ಗ್ರಾ.ಪಂ ಸದಸ್ಯ ಹನುಮಂತ ಪಟಗಾರ, ಈ ಮಹತ್ವಪೂರ್ಣ ಕಾರ್ಯಕ್ರಮದ ಬಗ್ಗೆ ಜನರಿಗೆ ಯಾವುದೇ ಮಾಹಿತಿ ಇಲ್ಲ. ನಮಗೂ ಮಾಹಿತಿ ಇರಲಿಲ್ಲ. ನಿನ್ನೆ ಶಾಲೆಯ ಎದುರು ಪೆಂಡಾಲ್ ಹಾಕುತ್ತಿರುವುದನ್ನು ನೋಡಿ ನಾವೆಲ್ಲ ಕೆಲವರೆಲ್ಲ ಸೇರಿ ವಿಚಾರಿಸಿದಾಗ ಡಿಸಿ ಕಾರ್ಯಕ್ರಮ ಇರುವುದು ತಿಳಿದುಬಂದಿದೆ. ಆ ಕ್ಷಣವೇ ನಾವು ವಿರೋಧ ಮಾಡಿದ್ದೇವೆ. ಬಳಿಕ ಎಸಿ ಮತ್ತು ತಹಶೀಲ್ದಾರರು ಬಂದು ನಮ್ಮನ್ನು ಸಮಾಧಾನ ಮಾಡಿದ್ದಾರೆ. ಈ ಗ್ರಾಮದ ಪ್ರಮುಖ ಜ್ವಲಂತ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಟ್ಟಿದ್ದೇವೆ. ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಇನ್ನು ಬರಲಿಲ್ಲ. ಕಾರ್ಯಕ್ರಮವನ್ನು ತಹಸೀಲ್ದಾರ್ ಅವರೇ ನಡೆಸುತ್ತಿದ್ದಾರೆ ಎಂದು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.
ಅಲ್ಲದೇ ಈ ಕಾರ್ಯಕ್ರಮದ ಬಗ್ಗೆ ಇಂದು ಬೆಳಗ್ಗೆ ಪಂಚಾಯತ್‌ನಿಂದ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗಿದೆ. ಮೊದಲೆ ಈ ಕಾರ್ಯಕ್ರಮದ ಬಳಿ ಜನರಿಗೆ ತಿಳಿದಿದ್ದರೆ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ನೇರವಾಗಿ ಡಿಸಿ ಅವರ ಬಳಿಯೇ ಹೇಳಿಕೊಳ್ಳುತ್ತಿದ್ದರು ಎಂದು ಊರಿನ ಕೆಲ ಪ್ರಮುಖರು ತಮ್ಮ ಅಸಮಧಾನವನ್ನು ತೋಡಿಕೊಂಡರು. ತಮ್ಮ ತಪ್ಪನ್ನು ಒಪ್ಪಿಕೊಂಡ ತಹಸೀಲ್ದಾರ್ ಅವರು ಮಾಹಿತಿ ಕೊರತೆಯಿಂದ ತರಾತುರಿಯಲ್ಲಿ ಕಾರ್ಯಕ್ರಮ ಸಂಘಟಿಸಿದ್ದೇವೆ. ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರ ಅಹಲವಾಲುಗಳನ್ನು ಇಲಾಖಾವಾರು ಪರಿಶೀಲಿಸಲಾಯಿತು.
ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ಕುಮಟಾದಲ್ಲಿ ತುರ್ತು ಸಭೆ ಕರೆದಿದ್ದರಿಂದ ಈ ಕಾರ್ಯಕ್ರಮಕ್ಕೆ ಬರಲು ವಿಳಂಬವಾಗಿದೆ. ಹಾಗಾಗಿ ಗ್ರಾಮಸ್ಥರ ಅಹವಾಲು ಸಭೆಯಲ್ಲಿ ನೀವು ಆರಂಭಿಸಿ ಎಂದು ನಾನು ತಹಸೀಲ್ದಾರ್‌ಗೆ ತಿಳಿಸಿದ್ದೇನೆ ಎಂದ ಅವರು ಜನರ ಅಹವಾಲನ್ನು ಸ್ವೀಕರಿಸಿ, ಕೆಲವಷ್ಟನ್ನು ಪರಿಹರಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ತಲಗೋಡ್‌ನ 2.28 ಎಕರೆಯಷ್ಟು ಗೋಮಾಳ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ. ಅದನ್ನು ಖುಲ್ಲಾ ಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸರ್ವೆ ನಡೆಸಿ, ಅತಿಕ್ರಮಣವಾಗಿದ್ದರೆ ಖುಲ್ಲಾ ಪಡಿಸಲು ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಗ್ರಾಮಸ್ಥರಾದ ಶ್ರೀಧರ ಮುಕ್ರಿ, ಶಂಕರ ಹಿರೇಕಟ್ಟು ಅವರು ಮಾತನಾಡಿ, ಪ್ರತಿ ವರ್ಷ ವಾಲಗಳ್ಳಿ ಮತ್ತು ಕೂಜಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ನೆರೆ ಬರುವುದರಿಂದ ನಮ್ಮ ಬದುಕು ದುಸ್ಥರವಾಗುತ್ತದೆ. ನೆರೆ ಸಂತ್ರಸ್ತರಿಗೆ ಶಾಸ್ವತ ಪರಿಹಾರ ಕಲ್ಪಿಸಬೇಕು. ವಾಸ್ತವ್ಯಕ್ಕೆ ಪರ್ಯಾಯ ಜಾಗ ಗುರುತಿಸಿಕೊಡಬೇಕೆಂದು ಡಿಸಿ ಬಳಿ ಮನವಿ ಮಾಡಿದರು. ವಾಲಗಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಡಿ.ಪಟಗಾರ ಮಾತನಾಡಿ, ಕೋಡಿಕಂಠದಿಂದ ಬೇಡೆಕಟ್ಟಿನ ಪ್ರದೇಶದಲ್ಲಿ ಉಪ್ಪು ನೀರಿನ ಹಾವಳಿಯಿಂದ ನೂರಾರು ಎಕರೆಯಷ್ಟು ಕೃಷಿ ಪ್ರದೇಶದಲ್ಲಿ ಕೃಷಿ ಮಾಡಲಾಗದ ದುಸ್ಥಿತಿ ಎದುರಾಗಿದೆ. ಹಾಗಾಗಿ ಆ ಭಾಗದಲ್ಲಿ ಖಾರ್ಲ್ಯಾಂಡ್ ನಿರ್ಮಿಸುವ ಮೂಲಕ ಉಪ್ಪು ನೀರಿನ ಹಾವಳಿ ತಪ್ಪಿಸಿ, ರೈತರಿಗೆ ಕೃಷಿ ಮಾಡಲು ಅನುಕೂಲ ಕಲ್ಪಿಸಬೇಕು. ನಮ್ಮ ಗ್ರಾಮದಲ್ಲಿರುವ ಸ್ಮಶಾನಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿಸಿ ನೀಡಿದರು.
ಪ್ರತಿ ವರ್ಷ ರೈತರಿಂದ ಬೆಳೆ ವಿಮೆ ಮಾಡಿಸಿಕೊಳ್ಳಲಾಗುತ್ತಿದೆ. ಮಳೆಯಿಂದ ಅದೆಷ್ಟೋ ಕೃಷಿಕರಿಗೆ ಹಾನಿಯಾಗಿದೆ. ಆದರೆ ಈತನ ಇನ್ಸುರೆನ್ಸ್ ಕಂಪನಿಯಿಂದ ಈ ಭಾಗದ ಒಬ್ಬ ರೈತನಿಗೂ ಬಿಳೆ ವಿಮೆಯ ಪರಿಹಾರ ದೊರೆತ್ತಿಲ್ಲ. ನಾವು ಪ್ರತಿ ವರ್ಷ ಬಿಳೆ ವಿಮೆ ಮಾಡಿಸಿ ಏನು ಪ್ರಯೋಜನ ಎಂದು ಹಲವು ರೈತರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರೀಯಿಸಿದ ತೋಟಗಾರಿಕೆ ಇಲಾಖೆಯ ಅಧಿಕಾರಿ ಅವರು ಈ ಭಾಗದಲ್ಲೆ ಅಷ್ಟೊಂದು ಮಳೆಯಾಗಿಲ್ಲ. ಹಾಗಾಗಿ ವಿಮಾ ಪರಿಹಾರ ದೊರೆತಿಲ್ಲ ಎಂದು ಹಾರಿಕೆ ಉತ್ತರ ನೀಡಿದಕ್ಕೆ ಆಕ್ರೋಶಗೊಂದ ಕೆಲ ರೈತರು ಖಾರವಾಗಿ ಪ್ರತಿಕ್ರಿಯಿಸಿದರು. ಮಳೆಯಿಂದ ಇಷ್ಟೆಲ್ಲ ಹಾನಿಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ನಿಮ್ಮ ಬಳಿ ಮಳೆಯಾದ ಬಗ್ಗೆ ಏನು ದಾಖಲೆ ಇದೆ. ಪರಿಹಾರ ಪಡೆಯುವ ಬಗ್ಗೆ ರೈತರಿಗೆ ನಿಮ್ಮ ಇಲಾಖೆಯಿಂದ ಮಾಹಿತಿ ನೀಡಿದ್ದೀರಾ..? ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು. ದಾರಿ ಸಮಸ್ಯೆ, ಊರಕೇರಿ ಶಾಲೆಯ ಅಡಿಗೆ ಕೋಣೆ, ನಲಿಕಲಿ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಹೊಸ ಕಟ್ಟಡ ಮಂಜೂರಾತಿಗೆ ವಿನಂತಿ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು. ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಪಿಂಚಣಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಆದೇಶ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಇಒ ನಾಗರತ್ನ ನಾಯಕ, ವಾಲಗಳ್ಳಿ ಗ್ರಾಪಂ ಅಧ್ಯಕ್ಷ ಪ್ರಕಾಶ ಶಾನಭಾಗ, ಉಪಾಧ್ಯಕ್ಷೆ ಗಂಗಾ ಪಟಗಾರ, ಸದಸ್ಯರಾದ ಪುಷ್ಪಾ ಮುಕ್ರಿ, ದೀಪಕ ಬಸ್ತಾಂವ್, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

300x250 AD
Share This
300x250 AD
300x250 AD
300x250 AD
Back to top