ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಯೋಜನೆ ಅಡಿಯಲ್ಲಿ ದಾವಣಗೆರೆಯ ಶೃತಿ ಸಾಂಸ್ಕೃತಿಕ ಕಲಾ ತಂಡದವರಿಂದ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಸಭಾಂಗಣದಲ್ಲಿ ಬೀದಿ ನಾಟಕ ಪ್ರದರ್ಶನಗೊಂಡಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅದರಂತೆ ಬೀದಿ ನಾಟಕ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ವರ್ತಕ ಶ್ರೀಕಾಂತ ಶಾನಭಾಗ, ಹಾರ್ಸಿಕಟ್ಟಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾರ್ಸಿಕಟ್ಟಾ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಮಂಜುನಾಥ ಆಚಾರ್ಯ, ಸೇವಾ ಪ್ರತಿನಿಧಿಗಳಾದ ಚಂದ್ರಮತಿ, ನೇತ್ರಾವತಿ ಉಪಸ್ಥಿತರಿದ್ದರು. ದಾವಣಗೆರೆಯ ಶೃತಿ ಸಾಂಸ್ಕೃತಿಕ ಕಲಾ ತಂಡದ ವೆಂಕಟೇಶ ಅವರ ನೇತೃತ್ವದಲ್ಲಿ ಗ್ರಾಮೀಣ ಸ್ವಚ್ಛತೆ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ, ದುಶ್ಚಟಗಳ ಪರಿಣಾಮ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸೌಲಭ್ಯಗಳ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು.
ಮಹಿಳಾ ಜ್ಞಾನ ವಿಕಾಸ ಯೋಜನೆಯ ಪ್ರಭಾವತಿ, ಮೇಲ್ವಿಚಾರಕ ಪ್ರದೀಪ ಕಾರ್ಯಕ್ರಮ ನಿರ್ವಹಿಸಿದರು.