ಕುಮಟಾ: ಸೆ.10ರಂದು ನಾಮಧಾರಿ ಸಭಾಭವನದಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಬಗ್ಗೆ ಜಾಗೃತಿ ಮೂಡಿಸಲು ಗುರುಗಳ ಭಕ್ತರು ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜಮಾಯಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತರು ಗುರುಗಳ ಭಾವಚಿತ್ರವಿರುವ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಬೈಕ್ ರ‍್ಯಾಲಿ ಹೆದ್ದಾರಿಯ ಮೂಲಕ ಮಾಸ್ತಿಕಟ್ಟೆ ಸರ್ಕಲ್ ಮಾರ್ಗವಾಗಿ ಹಳೇ ಬಸ್ ನಿಲ್ದಾಣ, ಬಸ್ತಿಪೇಟೆ ರಸ್ತೆ, ಸುಭಾಸ್ ರಸ್ತೆ ಮತ್ತು ಕೋರ್ಟ್ ರಸ್ತೆ ಮಾರ್ಗವಾಗಿ ಸಂಚರಿಸಿದ ಬೈಕ್ ರ‍್ಯಾಲಿ ಗಿಬ್ ಸರ್ಕಲ್ ಮೂಲಕ ನಾಮಧಾರಿ ಸಭಾಭವನದಲ್ಲಿ ಸಮಾವೇಶಗೊಂಡಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಗೀತೆಯ ಜೊತೆಗೆ ಗುರುಗಳ ಭಾವಚಿತ್ರಗಳಿರುವ ಸ್ತಬ್ಧ ಚಿತ್ರಗಳ ವಾಹನ ಮೆರವಣಿಗೆಯಲ್ಲಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಕಸಾಪ ಮಾಜಿ ಅಧ್ಯಕ್ಷ ಶ್ರೀಧರ ಗೌಡ ಉಪ್ಪಿನಗಣಪತಿ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಮೀನುಗಾರರ ಮುಖಂಡ ಜೈವಿಠ್ಠಲ ಕುಬಾಲ, ಉಪನ್ಯಾಸಕ ಪ್ರಮೋದ ನಾಯ್ಕ ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಇತರರು ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದ ಸಮಾಜಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮೂಲಕ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ ಗುರುಗಳ ಜಯಂತಿಯನ್ನು ನಾವೆಲ್ಲ ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕು. ಆ ನಿಟ್ಟಿನಲ್ಲಿ ಗುರುಗಳ ಅನುಯಾಯಿಗಳು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ, ಗುರುಗಳ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಬೈಕ್ ರ‍್ಯಾಲಿಯಲ್ಲಿ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್.ನಾಯ್ಕ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ, ಮೀನುಗಾರ ಮುಖಂಡ ಜೈವಿಠಲ್ ಕುಬಾಲ್, ಕಸಾಪ ಮಾಜಿ ಅಧ್ಯಕ್ಷ ಶ್ರೀಧರ ಗೌಡ ಉಪ್ಪಿನಗಣಪತಿ, ಐಕ್ಯ ಸಂಸ್ಥೆ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರಮುಖರಾದ ರಾಘವೇಂದ್ರ ನಾಯ್ಕ, ಅಣ್ಣಪ್ಪ ನಾಯ್ಕ, ವೈಭವ ನಾಯ್ಕ, ಕಮಲಾಕರ ನಾಯ್ಕ, ಮನೋಜ ನಾಯ್ಕ, ಗುರು ನಾಯ್ಕ, ರಾಘವೇಂದ್ರ ಜಾದವ್ ಸೇರಿದಂತೆ ನಾಮಧಾರಿ ಸಮಾಜ ಬಾಂಧವರು, ಗುರುಗಳ ಭಕ್ತರು ಪಾಲ್ಗೊಂಡಿದ್ದರು.