ಸಿದ್ದಾಪುರ: ವಿಶ್ವಶಾಂತಿ ಸೇವಾ ಟ್ರಸ್ಟ್ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಸ್ಥಾನದಲ್ಲಿ ಸೆ.13 ಅಂಗಾರಕ ಸಂಕಷ್ಟಿಯ ರಾತ್ರಿ 8 ಗಂಟೆಗೆ ಪಸಿದ್ಧ ಕಲಾವಿದರುಗಳಿಂದ ರಾಜಾ ಸತ್ಯ ಹರಿಶ್ಚಂದ್ರ ಯಕ್ಷಗಾನ ಪ್ರದರ್ಶನ ಹಾಗೂ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ವಹಿಸಿಕೊಳ್ಳಲಿದ್ದು, ಯಕ್ಷ ರಾತ್ರಿಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಚಾಲನೆ ನೀಡಲಿದ್ದಾರೆ. ಕೆವಿಜಿ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ಉಲ್ಲಾಸ ಆರ್.ಗುನಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ರಾಜಾ ಸತ್ಯ ಹರಿಶ್ಚಂದ್ರ ಯಕ್ಷಗಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಪ್ರದರ್ಶನ ಆಗಲಿದೆ.
ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಲಿದ್ದಾರೆ. ಮುಮ್ಮೇಳದಲ್ಲಿ ಕಲಾವಿದರಾದ
ವಿನಾಯಕ ಹೆಗಡೆ ಕಲಗದ್ದೆ, ವಿ.ಉಮಾಕಾಂತ ಭಟ್ಟ ಕೆರೇಕೈ, ಡಾ.ಜಿ.ಎಲ್.ಹೆಗಡೆ ಕುಮಟಾ, ಮೋಹನ ಭಾಸ್ಕರ ಹೆಗಡೆ ಹೆರವಟ್ಟ ನಾಗೇಂದ್ರ ಮುರೂರು, ಮಹಾಬಲೇಶ್ವರ ಇಟಗಿ, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ, ವಿನಯ ಹೊಸ್ತೋಟ, ತುಳಸಿ ಹೆಗಡೆ ಇತರರು ಪಾಲ್ಗೊಳ್ಳುವರು. ಯಕ್ಷಗಾನದ ಮುಂಚೂಣಿ ಕಲಾವಿದರ ಜೊತೆ ತಾಳಮದ್ದಲೆಯ ಹೆಸರಾಂತ ಕಲಾವಿದರಾದ ಕೆರೇಕೈ ಅವರು ವಿಶ್ವಾಮಿತ್ರ, ಮೋಹನ ಹೆಗಡೆ ಅವರು ಚಂದ್ರಮತಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ವೀರಬಾಹುಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹಳೆ ಬೇರು ಹೊಸ ಚಿಗುರಿನ ಮಿಳಿತ, ವೃತ್ತಿ, ಪ್ರವೃತ್ತಿ ಕಲಾವಿದರ ಕೂಡುವಿಕೆ ಇಲ್ಲಾಗಲಿದೆ. ಯಕ್ಷಗಾನದ ಪ್ರಸಾದನವನ್ನು ಎಂ.ಆರ್.ನಾಯ್ಕ ಕರ್ಸೇಬೈಲ್ ಮತ್ತು ಅವರ ಬಳಗ ನೀಡಲಿದೆ ಯಕ್ಷಗಾನ ಉಚಿತ ಪ್ರದರ್ಶನವಾಗಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.